ADVERTISEMENT

ಸುನಂದಾ ಪುಷ್ಕರ್‌ ಪ್ರಕರಣ| ದೆಹಲಿ ಹೈಕೋರ್ಟ್‌ನಿಂದ ಪೊಲೀಸರಿಗೆ ನೋಟಿಸ್‌ ಜಾರಿ

ಪಿಟಿಐ
Published 9 ಜೂನ್ 2020, 3:43 IST
Last Updated 9 ಜೂನ್ 2020, 3:43 IST
ಸುನಂದಾ ಪುಷ್ಕರ್‌ ಮತ್ತು ಶಶಿ ತರೂರ್‌
ಸುನಂದಾ ಪುಷ್ಕರ್‌ ಮತ್ತು ಶಶಿ ತರೂರ್‌    

ನವದೆಹಲಿ: ಪತ್ನಿ ಸುನಂದಾ ಪುಷ್ಕರ್‌ ಅವರು ಸಾಯುವುದಕ್ಕಿಂತ ಮುನ್ನ ಮಾಡಿರುವ ಟ್ವೀಟ್‌ಗಳನ್ನು ಹಾಗೂ ಅವರ ಟ್ವಿಟರ್‌ ಖಾತೆಯನ್ನು ಸಂರಕ್ಷಿಸಲು ಕ್ರಮ ಕೈಕೊಳ್ಳುವಂತೆ ನಿರ್ದೇಶಿಸಬೇಕು ಎಂದು ಕೋರಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೋಮವಾರ ಸೂಚಿಸಿದೆ.

ಈ ಪ್ರಕರಣದ ಕ್ರಿಮಿನಲ್‌ ವಿಚಾರಣೆಗೆ ಪುಷ್ಕರ್‌ ಅವರ ಟ್ವೀಟ್‌ಗಳು ಅಗತ್ಯವಿದೆ. ಆದ್ದರಿಂದ ಅವರ ಟ್ವಿಟರ್‌ ಖಾತೆಯನ್ನು ಮತ್ತು ಟ್ವೀಟ್‌ಗಳನ್ನು ಸಂರಕ್ಷಿಸಲು ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ವಿಟರ್‌ಗೆ ಪತ್ರ ಬರೆಯಲು ತನಿಖಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿ ಶಶಿ ತರೂರ್‌ ಅರ್ಜಿ ಸಲ್ಲಿಸಿದ್ದಾರೆ.ನ್ಯಾಯಮೂರ್ತಿ ಮನೋಜ್‌ ಕುಮಾರ್‌ ಓಹ್ರಿ ಅವರು ಅರ್ಜಿಯ ವಿಚಾರಣೆ ನಡೆಸಿ, ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.

ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಿದ ನ್ಯಾಯಪೀಠವು, ಮುಂದಿನ ವಿಚಾರಣೆಗೆ ಜುಲೈ 15ಕ್ಕೆ ಪ್ರಕರಣ ಮುಂದೂಡಿತು.

ADVERTISEMENT

ಹಿರಿಯ ವಕೀಲರಾದ ವಿಕಾಸ್‌ ಪಹ್ವಾ ಮತ್ತು ಗೌರವ್‌ ಗುಪ್ತಾ ತರೂರ್‌ ಪರ ವಾದ ಮಂಡಿಸಿ, ಪುಷ್ಕರ್‌ ಅವರ ಟ್ವೀಟ್‌ಗಳನ್ನು ಪರಿಶೀಲಿಸುವುದರಿಂದ ಅವರ ಮಾನಸಿಕ ಸ್ಥಿತಿ ಗೊತ್ತಾಗಲಿದೆ ಎಂದು ಹೇಳಿದರು.

ಪತಿಯೊಂದಿಗಿನ ಸಂಬಂಧದ ಒತ್ತಡದಿಂದಾಗಿ ಪುಷ್ಕರ್ ಅವರು ಮಾನಸಿಕ ತೊಳಲಾಟದಿಂದ ಬಳಲುತ್ತಿದ್ದರು ಎಂದು ಪೊಲೀಸರು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು.

2014ರ ಜನವರಿ 17ರ ರಾತ್ರಿ, ದೆಹಲಿಯ ಚಾಣಕ್ಯಪುರಿಯ ಪಂಚತಾರಾ ಹೋಟೆಲ್‌ ಲೀಲಾ ಪ್ಯಾಲೇಸ್‌‌ನ ಕೊಠಡಿಯಲ್ಲಿ ಸುನಂದಾ ಪುಷ್ಕರ್‌ ಅವರ ಮೃತದೇಹಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.