ADVERTISEMENT

ಗೋವಿಂದ ಪಾನ್ಸರೆ ಹತ್ಯೆ ಪ್ರಕರಣ ಎಟಿಎಸ್‌ಗೆ ವರ್ಗಾವಣೆ

ಪಿಟಿಐ
Published 3 ಆಗಸ್ಟ್ 2022, 10:30 IST
Last Updated 3 ಆಗಸ್ಟ್ 2022, 10:30 IST
ಬಾಂಬೆ ಹೈಕೋರ್ಟ್–ಪ್ರಾತಿನಿಧಿಕ ಚಿತ್ರ 
ಬಾಂಬೆ ಹೈಕೋರ್ಟ್–ಪ್ರಾತಿನಿಧಿಕ ಚಿತ್ರ    

ಮುಂಬೈ: ಹೋರಾಟಗಾರ ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಸಿಐಡಿಯಿಂದ ಎಟಿಎಸ್‌ಗೆ ವರ್ಗಾವಣೆ ಮಾಡಲಾಗಿದೆ. ಈ ಸಂಬಂಧಬಾಂಬೆ ಹೈಕೋರ್ಟ್‌ ಬುಧವಾರ ಆದೇಶ ಹೊರಡಿಸಿದೆ.

ಮಹಾರಾಷ್ಟ್ರ ಸಿಐಡಿಯ ವಿಶೇಷ ತನಿಖಾ ತಂಡವು (ಎಸ್‌ಐಟಿ) ಈವರೆಗೂ ಪ್ರಕರಣದ ತನಿಖೆ ನಡೆಸುತ್ತಿತ್ತು.

‘ತನಿಖೆಯ ಹೊಣೆಯನ್ನು ಸಿಐಡಿಯಿಂದ ಎಟಿಎಸ್‌ಗೆ ವರ್ಗಾಯಿಸುವಂತೆ ಪಾನ್ಸರೆ ಕುಟುಂಬದವರು ಮಾಡಿರುವ ಮನವಿಯನ್ನು ನಾವು ಪುರಸ್ಕರಿಸುತ್ತಿದ್ದೇವೆ’ ಎಂದು ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಹಾಗೂ ಶರ್ಮಿಳಾ ದೇಶಮುಖ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ಬುಧವಾರ ತಿಳಿಸಿದೆ.

ADVERTISEMENT

‘ಎಟಿಎಸ್‌ ಕೂಡ ರಾಜ್ಯ ಸರ್ಕಾರದ ಅಧೀನಕ್ಕೊಳಪಟ್ಟಿರುವ ತನಿಖಾ ಸಂಸ್ಥೆ. ಪ್ರಕರಣದ ತನಿಖೆಯ ಹೊಣೆಯನ್ನು ಆ ಸಂಸ್ಥೆಗೆ ವರ್ಗಾಯಿಸಲು ನಮ್ಮದೇನೂ ತಕರಾರಿಲ್ಲ. ಎಸ್‌ಐಟಿಯ ಕೆಲ ಅಧಿಕಾರಿಗಳು ಎಟಿಎಸ್‌ ಜೊತೆ ಇದ್ದು ತನಿಖೆಗೆ ಅಗತ್ಯ ಸಹಕಾರ ನೀಡಲಿದ್ದಾರೆ’ ಎಂದು ಎಸ್‌ಐಟಿ ಪರ ವಕೀಲ ಅಶೋಕ್‌ ಮುಂಡರಗಿ ನ್ಯಾಯಾಲಯಕ್ಕೆ ಹೇಳಿದರು.

‘ಎಡಿಜಿಯವರು ಎಟಿಎಸ್‌ನ ಉನ್ನತ ಅಧಿಕಾರಿಯಾಗಿದ್ದು, ಅವರೇ ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ’ ಎಂದು ಮುಂಡರಗಿ ತಿಳಿಸಿದರು.

‘2015ರಿಂದಲೂ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಪಾನ್ಸರೆ ಅವರ ಸೊಸೆ ಮೇಘಾಪಾನ್ಸರೆ ಹೋದ ತಿಂಗಳು ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.