ADVERTISEMENT

ಕುಮಾರಸ್ವಾಮಿಗೆ ರಾಹುಲ್‌ ಅಭಯ

​ಪ್ರಜಾವಾಣಿ ವಾರ್ತೆ
Published 30 ಮೇ 2019, 20:32 IST
Last Updated 30 ಮೇ 2019, 20:32 IST
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಿದರು
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಿದರು   

ನವದೆಹಲಿ: ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ,ಗುರುವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದರು.

ಲೋಕಸಭೆ ಚುನಾವಣೆಯ ಫಲಿತಾಂಶ ಹಾಗೂ ಸಮ್ಮಿಶ್ರ ಸರ್ಕಾರದ ಮುಂದುವರಿಕೆ ಕುರಿತು ಅರ್ಧ ಗಂಟೆ ನಡೆದ ಮಾತುಕತೆ ವೇಳೆ ಚರ್ಚಿಸಿದರು.

ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಬಿಜೆಪಿ ಮುಖಂಡರ ಪ್ರಯತ್ನಕ್ಕೆ ತಡೆ ಒಡ್ಡುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ನ ರಾಜ್ಯ ಮುಖಂಡರಿಗೆ ಸೂಚಿಸಲಾಗಿದೆ. ಜೆಡಿಎಸ್‌ ಶಾಸಕರು ಬಂಡಾಯ ಏಳದಂತೆ ನೋಡಿಕೊಳ್ಳಬೇಕು ಎಂದು ರಾಹುಲ್‌ ಗಾಂಧಿ ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಕಾಂಗ್ರೆಸ್‌ ಪಕ್ಷ ಸೂಕ್ತ ಸಹಕಾರ ಮತ್ತು ಬೆಂಬಲ ನೀಡಲಿದೆ. ರಾಜ್ಯದಲ್ಲಿನ ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದೆ’ ಎಂಬ ಅಭಯ ರಾಹುಲ್‌ರಿಂದ ದೊರೆಯಿತು ಎನ್ನಲಾಗಿದೆ.

‘ಚುನಾವಣೆಯ ವೇಳೆ ದೇಶದಾದ್ಯಂತ ಇದ್ದ ವಿರೋಧಿ ಅಲೆಯನ್ನು ಗುರುತಿಸುವಲ್ಲಿ ನಾವು ವಿಫಲವಾದೆವು. ನಕಾರಾತ್ಮಕ ಫಲಿತಾಂಶ ದೊರೆತಿರುವುದು ಆಶ್ಚರ್ಯ ಮೂಡಿಸಿದೆ’ ಎಂದು ರಾಹುಲ್‌ ಅವರಿಗೆ ಹೇಳಿದ ಕುಮಾರಸ್ವಾಮಿ, ‘ಯಾವುದೇ ಕಾರಣಕ್ಕೂ ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸಬೇಡಿ’ ಎಂಬ ಮನವಿ ಮಾಡಿದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.