ADVERTISEMENT

ಲೀಲಾವತಿ ಟ್ರಸ್ಟ್‌ ಪ್ರಕರಣ: ಸುಪ್ರೀಂ ಮೊರೆ ಹೋದ ಎಚ್‌ಡಿಎಫ್‌ಸಿ ಬ್ಯಾಂಕ್‌ ಎಂ.ಡಿ.

ಪಿಟಿಐ
Published 3 ಜುಲೈ 2025, 12:34 IST
Last Updated 3 ಜುಲೈ 2025, 12:34 IST
ಎಚ್‌ಡಿಎಫ್‌ಸಿ ಬ್ಯಾಂಕ್‌
ಎಚ್‌ಡಿಎಫ್‌ಸಿ ಬ್ಯಾಂಕ್‌   

ನವದೆಹಲಿ: ಮುಂಬೈನ ಲೀಲಾವತಿ ಆಸ್ಪತ್ರೆಯ ಪ್ರವರ್ತಕ ಸಂಸ್ಥೆಯಾದ ಲೀಲಾವತಿ ಕೀರ್ತಿಲಾಲ್‌ ಮೆಹ್ತಾ ಮೆಡಿಕಲ್‌ ಟ್ರಸ್ಟ್‌, ತಮ್ಮ ವಿರುದ್ಧ ದಾಖಲಿಸಿರುವ ವಂಚನೆ ಪ್ರಕರಣದ ಎಫ್‌ಐಆರ್‌ ಪ್ರಶ್ನಿಸಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಶಿಧರ್‌ ಜಗದೀಶನ್‌ ಗುರುವಾರ ಸುಪ್ರೀಂಕೊರ್ಟ್‌ ಮೊರೆ ಹೋಗಿದ್ದಾರೆ. 

ಜಗದೀಶನ್‌ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್‌ ರೋಹಟಗಿ, ‘ಇದೊಂದು ತುರ್ತು ವಿಷಯ. ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಅದರ  ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಲೀಲಾವತಿ ಗ್ರೂಪ್‌ನ ಟ್ರಸ್ಟಿಗಳು ಹುರುಳಿಲ್ಲದ ಆರೋಪದಡಿ ಎಫ್‌ಐಆರ್‌ ದಾಖಲಿಸಿದ್ದಾರೆ. ಇದರಿಂದ ಬ್ಯಾಂಕ್‌ ಪರದಾಡುವಂತಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌, ಲೀಲಾವತಿ ಗ್ರೂಪ್‌ನ ಟ್ರಸ್ಟಿಗಳಿಂದ ಹಣ ಮರಳಿ ಪಡೆದಿದೆ. ಇದನ್ನು ತಿರುಚಲು ಅವರು ಬ್ಯಾಂಕ್‌ನ ಎಂ.ಡಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ‌ಗೆ ಕೈಗೆತ್ತಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಪ್ರಕರಣದ ವಿಚಾರಣೆಯನ್ನು ಶುಕ್ರವಾರ (ಜುಲೈ 4ರಂದು) ನಡೆಸುವುದಾಗಿ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್‌ ಮತ್ತು ಕೆ. ವಿನೋದ್‌ ಚಂದ್ರನ್‌ ಅವರನ್ನೊಳಗೊಂಡ ಪೀಠ ತಿಳಿಸಿತು.  

ADVERTISEMENT

‘ನಾವು ಮುಂಬೈ ಹೈಕೋರ್ಟ್‌ ಮೊರೆ ಹೋಗಬಹುದಿತ್ತು. ಆದರೆ, ಇದುವರೆಗೆ ಅಲ್ಲಿನ ಮೂರು ಪೀಠಗಳು ಲೀಲಾವತಿ ಟ್ರಸ್ಟ್‌– ಎಚ್‌ಡಿಎಫ್‌ಸಿ  ಬ್ಯಾಂಕ್‌ ವ್ಯಾಜ್ಯಕ್ಕೆ ಸಂಬಂಧಿಸಿದ ವಿಚಾರಣೆಯಿಂದ ಹಿಂದೆ ಸರಿದಿವೆ ಹಾಗೂ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಲಾಗಿದೆ. ಇದೊಂದು ತುರ್ತು ಪ್ರಕರಣವಾಗಿ ವಿಚಾರಣೆಗೆ ಪರಿಗಣಿಸಬೇಕು’ ಎಂದು ರೋಹಟಗಿ ಕೋರ್ಟ್‌ಗೆ ಮನವಿ ಮಾಡಿದರು.  

ವಂಚನೆ ಆರೋಪ:

ಲೀಲಾವತಿ ಟ್ರಸ್ಟ್‌ನ ಆಡಳಿತದಲ್ಲಿ  ಹಿಡಿತ ಸಾಧಿಸಲು ಚೇತನ್‌ ಮೆಹ್ತಾ ಗ್ರೂಪ್‌ಗೆ, ಜಗದೀಶನ್‌ ಹಣಕಾಸು ಸಲಹೆ ನೀಡಿದ್ದು, ಇದಕ್ಕಾಗಿ ₹2.05 ಕೋಟಿ ಲಂಚ ಪಡೆದಿದ್ದಾರೆ. ಜಗದೀಶನ್‌ ಅವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು  ಟ್ರಸ್ಟ್‌ನ ಆಂತರಿಕ ವಿಷಯದಲ್ಲೂ ಮೂಗು ತೂರಿಸಿದ್ದಾರೆ ಎಂದು ಲೀಲಾವತಿ ಟ್ರಸ್ಟ್‌ ಆರೋಪಿಸಿದೆ.  

ಬಾಂದ್ರಾ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶದಂತೆ ಜಗದೀಶನ್‌ ವಿರುದ್ಧ ಬಾಂದ್ರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್‌ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆಯೂ ಲೀಲಾವತಿ ಟ್ರಸ್ಟ್‌ ಕೋರ್ಟ್‌ಗೆ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.