ADVERTISEMENT

ಮೋದಿ 'ಭಾರತವೆಂಬ ಕಾರನ್ನು' ಹಿಂಬದಿ ಕನ್ನಡಿ ನೋಡಿಕೊಂಡು ಓಡಿಸುತ್ತಿದ್ದಾರೆ: ರಾಹುಲ್‌

ಪಿಟಿಐ
Published 5 ಜೂನ್ 2023, 2:33 IST
Last Updated 5 ಜೂನ್ 2023, 2:33 IST
ರಾಹುಲ್‌ ಗಾಂಧಿ (ಪಿಟಿಐ ಚಿತ್ರ)
ರಾಹುಲ್‌ ಗಾಂಧಿ (ಪಿಟಿಐ ಚಿತ್ರ)   

ನ್ಯೂಯಾರ್ಕ್‌ : ‘ಪ್ರಧಾನಿ ನರೇಂದ್ರ ಮೋದಿ ಭಾರತವೆಂಬ ಕಾರನ್ನು ಹಿಂಬದಿ ಕನ್ನಡಿ ನೋಡಿಕೊಂಡು ಓಡಿಸುತ್ತಿದ್ದಾರೆ. ಅಪಘಾತವಾಗಿ ಕಾರು ನಿಂತಾಗ ಅದು ಯಾಕೆ ಮುಂದೆ ಸಾಗುತ್ತಿಲ್ಲ ಎಂದು ಅವರು ಯೋಚಿಸುತ್ತಾರೆ‘ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಮೆರಿಕದ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅಲ್ಲಿನ ಜಾವಿಟ್ಸ್ ಸೆಂಟರ್‌ನಲ್ಲಿ ಭಾರತೀಯ–ಅಮೆರಿಕನರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಒಡಿಶಾ ರೈಲು ದುರಂತದಲ್ಲಿ ಸಾವಿಗೀಡಾದವರಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.

‘ನನಗಿನ್ನೂ ನೆನಪಿದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ರೈಲು ಅಪಘಾತವೊಂದು ನಡೆದಿತ್ತು. ಆಗ ರೈಲ್ವೇ ಸಚಿವರು ‘ಈಗ ನಡೆದ ಅಪಘಾತಕ್ಕೆ ಬ್ರಿಟಿಷರು ಕಾರಣ‘ ಎಂದು ಹೇಳಿರಲಿಲ್ಲ. ‘ಇದರ ಸಂಪೂರ್ಣ ಹೊಣೆ ನನ್ನದು ಎಂದು ಒಪ್ಪಿಕೊಂಡು ರಾಜೀನಾಮೆ ನೀಡುತ್ತೇನೆ‘ ಎಂದಿದ್ದರು. ಆದರೆ ಇತ್ತೀಚೆಗೆ ಭಾರತದಲ್ಲಿ ತಪ್ಪುಗಳು ನಡೆದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿಲ್ಲ‘ ಎಂದು ಪರೋಕ್ಷವಾಗಿ ಬಿಜೆಪಿ ಕುರಿತು ಟೀಕಿಸಿದ್ದಾರೆ.

ADVERTISEMENT

‘ಅವರು (ಪ್ರಧಾನಿ ಮೋದಿ) ಭಾರತವೆಂಬ ಕಾರನ್ನು ಹಿಂಬದಿ ಕನ್ನಡಿ ನೋಡಿಕೊಂಡು ಓಡಿಸುತ್ತಿದ್ದಾರೆ. ಕಾರು ಅಪಘಾತಗೊಂಡು ನಿಂತಾಗ ಅದು ಏಕೆ ಮುಂದೆ ಸಾಗುತ್ತಿಲ್ಲ ಎಂಬುವುದರ ಬಗ್ಗೆ ಅವರಿಗೆ ಅರಿವಿಲ್ಲ. ಪ್ರಧಾನಿಯಿಂದ ಹಿಡಿದು ಬಿಜೆಪಿಯ ಯಾರೊಬ್ಬರು ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಹಿಂದೆ ಆಗಿ ಹೋಗಿರುವುದರ ಬಗ್ಗೆ ಮಾತ್ರ ಮಾತನಾಡುತ್ತಾರೆ. ಭವಿಷ್ಯದ ಬಗ್ಗೆ ಯೋಚಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅಸಮರ್ಥವಾಗಿವೆ‘ ಎಂದರು.

‘ಭಾರತದಲ್ಲಿ ಹಿಂದಿನಿಂದಲೂ ಕಾಂಗ್ರೆಸ್‌ ಮತ್ತು ಬಿಜೆಪಿ/ಆರ್‌ಎಸ್‌ಎಸ್‌ ಪ್ರತಿಪಾದಿಸುವ ಸಿದ್ದಾಂತಗಳ ನಡುವೆ ಹೋರಾಟ ನಡೆಯುತ್ತಿದೆ. ಒಂದು ಕಡೆ ಮಹಾತ್ಮ ಗಾಂಧಿ ಮತ್ತು ಇನ್ನೊಂದು ಕಡೆಯಲ್ಲಿ ನಾಥೂರಾಂ ಗೋಡ್ಸೆ ಇದ್ದಾರೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.