ADVERTISEMENT

ಉತ್ತರ ಭಾರತದ ಹಲವೆಡೆ ಭಾರಿ ಮಳೆ: ಪ್ರವಾಹದ ವಿಡಿಯೊಗಳನ್ನು ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜುಲೈ 2023, 9:53 IST
Last Updated 9 ಜುಲೈ 2023, 9:53 IST
Venugopala K.
   Venugopala K.

ನವದೆಹಲಿ: ದೆಹಲಿ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶ ಸೇರಿ ಉತ್ತರ ಭಾರತದ ಹಲವೆಡೆ ಮಳೆಯ ಅಬ್ಬರ ಜೋರಾಗಿದ್ದು, ಹಲವೆಡೆ ನದಿಗಳು, ಕೆರೆ ಕಟ್ಟೆಗಳು ಉಕ್ಕಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ.

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಚರುಡು ಗ್ರಾಮದಲ್ಲಿ ಬಿಯಾಸ್ ನದಿ ಉಕ್ಕಿ ಹರಿಯುತ್ತಿದ್ದು, ಜಲಾವೃತಗೊಂಡ ಮನೆಯಿಂದ ಐವರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ( ಎನ್‌ಡಿಆರ್‌ಎಫ್) ರಕ್ಷಿಸಿದೆ. ಇದೇವೇಳೆ, ಚಂದ್ರಾತಾಲ್, ಪಾಗಲ್ ನಾಲಾ, ಮಲಿಂಗ್ ನಾಲಾದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮುಂಬರುವ ಅಪಾಯ ಎದುರಿಸಲು ಸಜ್ಜಾಗಿದ್ದೇವೆ. ನೆರೆ ಪೀಡಿತ ಪ್ರದೇಶಗಳ ಜನರಿಗೆ ಆಹಾರವನ್ನು ತಲುಪಿಸಲಾಗಿದೆ ಎಂದು ಪ್ರವಾಸ ಇಲಾಖೆಯ ಅಧಿಕಾರಿ ಬಿ.ಎಸ್. ಬಲಿ ಹೇಳಿದ್ದಾರೆ.

ADVERTISEMENT

ಭಾರಿ ಮಳೆಯಿಂದ ಚಂಡೀಗಢದ ಸುಖನಾ ಕೆರೆಯಲ್ಲಿ ಕೋಡಿ ಬಿದ್ದಿದ್ದು, ಫ್ಲಡ್ ಗೇಟ್‌ಗಳನ್ನು ತೆರೆಯಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಗವಾರಿ ಗಂಡೋಹ್‌ನಿಂದ ಜಮ್ಮುವಿಗೆ ಸಂಚರಿಸುತ್ತಿದ್ದ ಬಸ್‌ ಮೇಲೆ ಭಂಗ್ರೂ ಬಳಿ ಗುಡ್ಡ ಕುಸಿದಿದ್ದು, ಮಣ್ಣಿನಡಿ ಸಿಲುಕಿ ಇಬ್ಬರು ಮೃತಪಟ್ಟಿದ್ದು, ಇಬ್ಬರನ್ನು ರಕ್ಷಿಸಲಾಗಿದೆ.

ಭಾರಿ ಮಳೆಯ ಪರಿಣಾಮ ಹಿಮಾಚಲ ಪ್ರದೇಶದ ಬನಿಖೇಟ್ ಬಳಿ ರಸ್ತೆ ಬಿರುಕು ಬಿಟ್ಟಿದ್ದರಿಂದ ಛಂಬಾ–ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಹಿಮಾಚಲ ಪ್ರದೇಶದ ಬಿಯಾಸ್ ನದಿ ಉಕ್ಕಿ ಹರಿಯುತ್ತಿದೆ.

ಉತ್ತರಾಖಂಡದ ಚಿಂಕಾ ಬಳಿ ಭೂಕುಸಿತದಿಂದಾಗಿ ಬದರಿನಾಥ ರಾಷ್ಟ್ರೀಯ ಹೆದ್ದಾರಿಯ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.