ADVERTISEMENT

ಕೇರಳದಲ್ಲಿ ಭಾರಿ ಮಳೆ: 4 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಪಿಟಿಐ
Published 15 ಅಕ್ಟೋಬರ್ 2023, 11:03 IST
Last Updated 15 ಅಕ್ಟೋಬರ್ 2023, 11:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ತಿರುವನಂತಪುರ: ಕೇರಳದ ಹಲವು ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಸತತ ಭಾರಿ ಮಳೆಯಾಗುತ್ತಿದ್ದು, ರಾಜ್ಯದ ಅನೇಕ ಭಾಗಗಳಲ್ಲಿ ಭಾನುವಾರ ಭೂಕುಸಿತ ಮತ್ತು ಪ್ರವಾಹ ಉಂಟಾಗಿದೆ.

ರಾಜ್ಯದ ದಕ್ಷಿಣ ಭಾಗದ ತಿರುವನಂತಪುರದಲ್ಲಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಎರ್ನಾಕುಳಂ ಜಿಲ್ಲೆಯ ಹಲವು ಭಾಗಗಳಲ್ಲಿ  ರಸ್ತೆಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದೆ.

ಶನಿವಾರ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ರಾಜಧಾನಿ ತಿರುವನಂತಪುರ ನಗರದ ವಿವಿಧೆಡೆ ಹಾಗೂ ಉಪನಗರಗಳಲ್ಲಿ ನೂರಾರು ಮನೆಗಳು ಜಲಾವೃತವಾಗಿವೆ. ನೂರಾರು ಮನೆಗಳಿಗೆ ಹಾನಿಯಾಗಿದೆ. ಸುಮಾರು 500 ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ADVERTISEMENT

ನಗರದ ಪ್ರಮುಖ ಖಾಸಗಿ ಆಸ್ಪತ್ರೆಯೊಂದರ ನೆಲ ಮಹಡಿ ಕೂಡ ಜಲಾವೃತವಾಗಿದೆ. ಕಳಕೂಟಂ ಕಾಲೊನಿಯ ಟೆಕ್ನೋಪಾರ್ಕ್ ಪಾರ್ಕ್ ಪ್ರದೇಶವೂ ಜಲಾವೃತವಾಗಿದೆ. ಭಾನುವಾರ ಬೆಳ್ಳಂಬೆಳಿಗ್ಗೆಯೇ ಮಳೆ ನೀರು ಹಲವು ಮನೆಗಳಿಗೆ ನುಗ್ಗಿದಾಗ ನಿಗರ ನಿವಾಸಿಗಳು ಬೆಚ್ಚಿಬಿದ್ದರು. ರಾಜಕಾಲುವೆಗಳ ಅಸಮರ್ಪಕ ನಿರ್ವಹಣೆಯೇ ನೀರು ನುಗ್ಗಲು ಕಾರಣವೆಂದು ನಿವಾಸಿಗಳು ಸ್ಥಳೀಯಾಡಳಿತವನ್ನು ದೂರಿದ್ದಾರೆ.

‘2018ರ ಪ್ರವಾಹದ ವೇಳೆಯೂ ಇಂತಹ ಪರಿಸ್ಥಿತಿ ಉಂಟಾಗಿರಲಿಲ್ಲ. ಮಧ್ಯರಾತ್ರಿಯ ನಂತರ ಹಠಾತ್ತನೆ ಮನೆಗಳಿಗೆ ನೀರು ನುಗ್ಗಲಾರಂಭಿಸಿತು. ಇದು ಅನಿರೀಕ್ಷಿತವಾಗಿತ್ತು’ ಎಂದು ರಾಜಧಾನಿಯ ನಿವಾಸಿಗಳು ಹೇಳಿದ್ದಾರೆ.

ರಕ್ಷಣಾ ಸಿಬ್ಬಂದಿ, ತಿರುವನಂತಪುರದಲ್ಲಿ ಜಲಾವೃತ ಪ್ರದೇಶಗಳಿಂದ ಜನರನ್ನು ಗಾಳಿ ತುಂಬಿದ ದೋಣಿಗಳಲ್ಲಿ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸುತ್ತಿರುವ ಮತ್ತು ನೀರಿನಲ್ಲಿ ಕಾರುಗಳು ಭಾಗಶಃ ಮುಳುಗಿರುವ ದೃಶ್ಯಗಳನ್ನು ಟಿ.ವಿ ವಾಹಿನಿಯೊಂದು  ಪ್ರಸಾರ ಮಾಡಿದೆ.

ರಾಜಧಾನಿಯಲ್ಲಿ ಬಿಗಡಾಯಿಸಿದ ಪರಿಸ್ಥಿತಿ
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ತಿರುವನಂತಪುರ ನಗರದಲ್ಲಿ ಮಳೆಯು ಅಸಾಮಾನ್ಯ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಹಲವೆಡೆ ಜಲಾವೃತವಾಗಿರುವುದು ಮತ್ತು ಹೆಚ್ಚುತ್ತಿರುವ ಸಮುದ್ರದ ನೀರಿನಮಟ್ಟದಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಪ್ರವಾಹಪೀಡಿತ ಪ್ರದೇಶದಲ್ಲಿ ಜಿಲ್ಲಾಡಳಿತವು ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ. ಪ್ರವಾಹ ಪರಿಸ್ಥಿತಿ ಕುರಿತು ನಡೆದ ಸಚಿವರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೆ.ರಾಜನ್‌  ತಿರುವನಂತಪುರದಲ್ಲಿ ಹಲವು ಭಾಗಗಳಲ್ಲಿ ಗಂಭೀರ ಹಾನಿ ಆಗಿದೆ. ಶನಿವಾರ ರಾತ್ರಿಯಿಂದ ರಾಜಧಾನಿಯಲ್ಲಿ 10 ಸೆಂ.ಮೀ ನಷ್ಟು ಮಳೆಯಾಗಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ದುಪ್ಪಟ್ಟು ಮಳೆಯಾಗಿದೆ. ಇದು ಕೂಡ ತಗ್ಗುಪ್ರದೇಶಗಳು ಜಲಾವೃತವಾಗಿ ಪ್ರವಾಹ ಸೃಷ್ಟಿಗೆ ಕಾರಣವಾಗಿದೆ ಎಂದು ತಿಳಿಸಿದರು.
ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌
ತಿರುವನಂತಪುರ ಕೊಲ್ಲಂ ಪತ್ತನಂತಿಟ್ಟ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಮತ್ತು ಎಂಟು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಅನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ ಐದು ದಿನಗಳವರೆಗೆ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.