ADVERTISEMENT

‘ಉತ್ತರ’ದಲ್ಲಿ ಭಾರಿ ವರ್ಷಧಾರೆ: 15 ಸಾವು

ಹಲವೆಡೆ ಭೂಕುಸಿತ * ಲಡಾಖ್‌ನಲ್ಲಿ ಅಕಾಲಿಕ ಹಿಮಪಾತ

ಪಿಟಿಐ
Published 9 ಜುಲೈ 2023, 15:48 IST
Last Updated 9 ಜುಲೈ 2023, 15:48 IST
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಭಾರಿ ಮಳೆಗೆ ಮನೆಯೊಂದು ಕುಸಿದಿದೆ –ಪಿಟಿಐ ಚಿತ್ರ
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಭಾರಿ ಮಳೆಗೆ ಮನೆಯೊಂದು ಕುಸಿದಿದೆ –ಪಿಟಿಐ ಚಿತ್ರ    

ನವದೆಹಲಿ: ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು–ಕಾಶ್ಮೀರ, ಲಡಾಖ್‌, ರಾಷ್ಟ್ರ ರಾಜಧಾನಿ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವೆಡೆ ಭಾನುವಾರ ಭಾರಿ ಮಳೆಯಾಗಿದೆ.

ಉತ್ತರಾಖಂಡ, ಹಿಮಾಚಲಪ್ರದೇಶದಲ್ಲಿಯೂ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಭೂಕುಸಿತವೂ ಉಂಟಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು ಹಾಳಾಗಿದ್ದು, ಹಳಿಗಳ ಮೇಲೆ ಬಂಡೆಗಳು ಬಿದ್ದ ಹಿನ್ನೆಲೆಯಲ್ಲಿ ವಾಹನ–ರೈಲುಗಳ ಸಂಚಾರ ವ್ಯತ್ಯಯವಾಗಿದೆ. ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ.

ಮಳೆ ಸಂಬಂಧಿತ ಅವಘಡಗಳಲ್ಲಿ ಇಬ್ಬರು ಬಾಲಕಿ ಸೇರಿದಂತೆ 15 ಮಂದಿ ಮೃತಪಟ್ಟಿದ್ದಾರೆ. ಮೂವರು ನಾಪತ್ತೆಯಾಗಿದ್ದರೆ, ಇಬ್ಬರಿಗೆ ಗಾಯಗಳಾಗಿವೆ. ದೆಹಲಿಯ ಶ್ರೀನಿವಾಸಪುರಿಯಲ್ಲಿ ಸರ್ಕಾರಿ ಶಾಲೆಯ ಒಂದು ಭಾಗದ ಗೋಡೆ ಕುಸಿದಿದೆ. ನಾಲ್ಕು ತಿಂಗಳ ಹಿಂದೆಯಷ್ಟೆ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು.

ADVERTISEMENT

ಬೆಳಿಗ್ಗೆ 8.30ಕ್ಕೆ ಕೊನೆಗೊಂಡ ಹಿಂದಿನ 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 15.3 ಸೆಂ.ಮೀ.ನಷ್ಟು ಮಳೆ ಬಿದ್ದಿದೆ. 1982ರ ಜುಲೈ ನಂತರ ಒಂದು ದಿನದಲ್ಲಿ ಬಿದ್ದ ಗರಿಷ್ಠ ಪ್ರಮಾಣದ ಮಳೆ ಇದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. 

ದೇಶದಾದ್ಯಂತ ಜುಲೈ ತಿಂಗಳ ಮೊದಲ ಎಂಟು ದಿನಗಳಲ್ಲಿ ಒಟ್ಟು 24.32 ಸೆಂ.ಮೀ.ನಷ್ಟು ಮಳೆ ಬಿದ್ದಿದೆ. ವಾಡಿಕೆ ಮಳೆಗಿಂತ ಶೇ 2ರಷ್ಟು ಹೆಚ್ಚು ಮಳೆ ಬಿದ್ದಂತಾಗಿದ್ದು, ಈವರೆಗಿನ ಮಳೆ ಕೊರತೆಯನ್ನು ನೀಗಿಸಿದಂತಾಗಿದೆ ಎಂದು ಐಎಂಡಿ ಹೇಳಿದೆ

ಪಶ್ಚಿಮದಲ್ಲಿ ವಾತಾವರಣದಲ್ಲಿನ ಕ್ಷೋಭೆ ಹಾಗೂ ಮುಂಗಾರು ಮಾರುತಗಳು ಜೋರಾಗಿ ಬೀಸುತ್ತಿರುವುದೇ ಭಾರಿ ಮಳೆಗೆ ಕಾರಣ ಎಂದೂ ಇಲಾಖೆ ತಿಳಿಸಿದೆ.

ಯಾತ್ರೆ ಮತ್ತೆ ಆರಂಭ: ಪ್ರತಿಕೂಲ ಹವಾಮಾನ ಕಾರಣ ಮೂರು ದಿನಗಳಿಂದ ಸ್ಥಗಿತಗೊಳಿಸಲಾಗಿದ್ದ ಅಮರನಾಥ ಯಾತ್ರೆಯನ್ನು ಭಾನುವಾರ ಪುನಃ ಆರಂಭಿಸಲಾಯಿತು. ಜಮ್ಮು–ಕಾಶ್ಮೀರದ ಪಂಜ್‌ತರಣಿ ಹಾಗೂ ಶೇಷನಾಗ್‌ದಲ್ಲಿನ ಶಿಬಿರಗಳಲ್ಲಿದ್ದ ಯಾತ್ರಿಗಳು ಪ್ರಯಾಣ ಮುಂದುವರಿಸಿದರು.

ಮಾಹಿತಿ ಪಡೆದ ಶಾ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ದೆಹಲಿ, ಕೇಂದ್ರಾಡಳಿತ ಪ್ರದೇಶ ಜಮ್ಮು–ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ಗಳಿಗೆ ಕರೆ ಮಾಡಿ, ಮಳೆಯಿಂದಾಗಿ ಉದ್ಭವಿಸಿರುವ ಪ‍ರಿಸ್ಥಿತಿ ಕುರಿತು ಮಾಹಿತಿ ಪಡೆದರು.

ಜಮ್ಮು–ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರಿಂದ ಅಮರನಾಥ ಯಾತ್ರೆ ಹಾಗೂ  ದೆಹಲಿಯಲ್ಲಿನ ಪರಿಸ್ಥಿತಿ ಕುರಿತು ಲೆಫ್ಟಿನೆಂಟ್‌ ಗವರ್ನರ್ ವಿ.ಕೆ.ಸಕ್ಸೇನಾ ಅವರಿಂದ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.

ದೆಹಲಿಯ ಪೂರ್ವ ಕೈಲಾಸ ಪ್ರದೇಶದಲ್ಲಿ ಸರ್ಕಾರಿ ಶಾಲೆಯ ಗೋಡೆ ಕುಸಿದು ಬಿದ್ದಿರುವ ಸ್ಥಳಕ್ಕೆ ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚದೇವ ಭಾನುವಾರ ಭೇಟಿ ನೀಡಿದರು –ಪಿಟಿಐ ಚಿತ್ರ
ಹಿಮಾಚಲಪ್ರದೇಶದ ಮಂಡಿ ಬಳಿ ಬಿಯಾಸ್‌ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದುದು ಭಾನುವಾರ ಕಂಡು ಬಂತು –ಪಿಟಿಐ ಚಿತ್ರ
ದೆಹಲಿಯ ರಸ್ತೆಯಲ್ಲಿ ನಿಂತ ಮಳೆ ನೀರಿನಲ್ಲಿ ಮಕ್ಕಳು ಆಟವಾಡುತ್ತಿದ್ದು ಭಾನುವಾರ ಕಂಡುಬಂತು –ಪಿಟಿಐ ಚಿತ್ರ
ಜಮ್ಮು–ಕಾಶ್ಮೀರದ ಪೂಂಚ್‌ನಲ್ಲಿ ಕರ್ತವ್ಯನಿರತರಾಗಿದ್ದ ಲಾನ್ಸ್‌ನಾಯಕ್ ತೇಲುರಾಮ್ ಹಾಗೂ ನಾಯಬ್ ಸುಬೇದಾರ್ ಕುಲದೀಪ್‌ ಸಿಂಗ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ  –ಪಿಟಿಐ ಚಿತ್ರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.