ADVERTISEMENT

ಉತ್ತರಾಖಂಡದಲ್ಲಿ ಹಿಮನದಿ ಸ್ಪೋಟ: ಉ.ಪ್ರದೇಶದ ಗಂಗಾತಟದ ಜಿಲ್ಲೆಗಳಲ್ಲಿ ಹೈ ಅಲರ್ಟ್

ಪಿಟಿಐ
Published 8 ಫೆಬ್ರುವರಿ 2021, 4:07 IST
Last Updated 8 ಫೆಬ್ರುವರಿ 2021, 4:07 IST
ಹಿಮನದಿ ಸ್ಫೋಟದ ಬಳಿಕ ರಕ್ಷಣಾ ಕಾರ್ಯಾಚರಣೆ: ಪಿಟಿಐ ಚಿತ್ರ
ಹಿಮನದಿ ಸ್ಫೋಟದ ಬಳಿಕ ರಕ್ಷಣಾ ಕಾರ್ಯಾಚರಣೆ: ಪಿಟಿಐ ಚಿತ್ರ   

ಲಖನೌ: ನೆರೆಯ ಉತ್ತರಾಖಂಡದಲ್ಲಿ ಜೋಶಿಮಠದ ಬಳಿ ಹಿಮನದಿ ಸ್ಫೋಟಗೊಂಡು ಹಲವು ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗಂಗಾ ನದಿಯ ತಟದಲ್ಲಿರುವ ಎಲ್ಲ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನದಿಯಲ್ಲಿ ನಿರಂತರ ನೀರಿನಮಟ್ಟದ ಬಗ್ಗೆ ಗಮನ ಇಡುವಂತೆ ಸೂಚಿಸಲಾಗಿದೆ.

ಹಿಮನದಿಯ ಸ್ಫೋಟದ ಪರಿಣಾಮವಾಗಿ ಹಿಮಪಾತ ಮತ್ತು ಪ್ರವಾಹದ ಪರಿಸ್ಥಿತಿ ಉಂಟಾಯಿತು. ಸಮೀಪದ ಜಲವಿದ್ಯುತ್ ಕಾಮಗಾರಿ ಕೊಚ್ಚಿಹೋಗಿದೆ. ಘಟನೆಯಲ್ಲಿ ಕನಿಷ್ಠ 7 ಕಾರ್ಮಿಕರು ಮೃತಪಟ್ಟಿದ್ದು, 125 ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ, ಅಲಕಾನಂದ ನದಿಯಲ್ಲೂ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.

ಉತ್ತರಪ್ರದೇಶದ ಜಿಲ್ಲಾಧಿಕಾರಿಗಳಿಗೆ ಭಾನುವಾರ ನೀಡಲಾದ ವಿಪತ್ತು ಮುನ್ಸೂಚನೆಯಲ್ಲಿ, "ಉತ್ತರಾಖಂಡದ ನಂದಾ ದೇವಿ ಹಿಮನದಿಯ ಒಂದು ಭಾಗವು ಹಿಮನದಿ ಸ್ಫೋಟದಲ್ಲಿ ಒಡೆದಿರುವ ವರದಿಗಳು ಬಂದಿವೆ. ಹಾಗಾಗಿ, ಗಂಗಾ ನದಿಯ ದಡದಲ್ಲಿರುವ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ. 24 ಗಂಟೆ ನೀರಿನ ಮಟ್ಟದ ಮೇಲ್ವಿಚಾರಣೆ ನಡೆಸಬೇಕಾಗಿದೆ " ಎಂದು ಪರಿಹಾರ ಆಯುಕ್ತರು ಹೇಳಿದ್ಧಾರೆ.

"ಅಗತ್ಯ ಬಿದ್ದರೆ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುತ್ತದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪಿಎಸಿ ಪ್ರವಾಹ ನಿರ್ವಹಣಾ ತಂಡಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹಿಂದಿ ಭಾಷೆಯಲ್ಲಿ ಮಾಡಿದ ಟ್ವೀಟ್‌ನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಉತ್ತರಾಖಂಡದಲ್ಲಿನ ನೈಸರ್ಗಿಕ ವಿಕೋಪವನ್ನು ನಿಭಾಯಿಸಲು, ಉತ್ತರ ಪ್ರದೇಶ ಸರ್ಕಾರವು ಸಾಧ್ಯವಿರುವ ಎಲ್ಲ ನೆರವನ್ನು ನೀಡಲಿದೆ. ಉತ್ತರಾಖಂಡದಲ್ಲಿ ಹಿಮನದಿ ಸ್ಫೋಟದ ನಂತರ ಸಂಭವಿಸಿದ ಅನಾಹುತದಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆಂಬ ಸುದ್ದಿ ಇದೆ. ಮೃತರ ಆತ್ಮಗಳಿಗೆ ಶಾಂತಿ, ಮೃತರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ನೀಡಲೆಂದು ಮತ್ತು ಗಾಯಾಳುಗಳು ಬೇಗ ಚೇತರಿಸಿಕೊಳ್ಳಲೆಂದು ರಾಮನಲ್ಲಿ ಪ್ರಾರ್ಥಿಸುವುದಾಗಿ." ಹೇಳಿದ್ದಾರೆ.

ಅಲಕನಂದಾ ನದಿಯ ನೀರಿನ ಪ್ರಮಾಣದ ಬಗ್ಗೆ ಗೃಹ ಇಲಾಖೆ ಅಧಿಕರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಇದಕ್ಕೂ ಮುನ್ನ ಅವರು ಸುದ್ದಿಗಾರರಿಗೆ ತಿಳಿಸಿದ್ದರು.

"ನೀರು ತಗ್ಗು ಪ್ರದೇಶಗಳನ್ನು ತಲುಪಲು ಸಮಯ ತೆಗೆದುಕೊಳ್ಳುತ್ತದೆ ಎಂಬುದು ನಮ್ಮ ಕಲ್ಪನೆ. ಹರಿದ್ವಾರದ ನಂತರ, ನಾವು ನರೋರಾ ಮತ್ತು ಬಿಜ್ನೋರ್‌ನ ಬ್ಯಾರೇಜ್‌ಗಳಲ್ಲಿ ನೀರಿನ ಪ್ರಮಾಣದ ಮೇಲ್ವಿಚಾರಣೆ ನಡೆಸುತ್ತೇವೆ. ಕೆಳಹಂತದ ಪ್ರದೇಶಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ”ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.