ADVERTISEMENT

ಕೇರಳದಲ್ಲಿ ಪರಿಹಾರ ಘೋಷಣೆ ವಿಚಾರ: ಪಕ್ಷಪಾತದ ಕಿಡಿ

ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ₹10 ಲಕ್ಷ ಪರಿಹಾರ ಘೋಷಣೆ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 13:34 IST
Last Updated 9 ಆಗಸ್ಟ್ 2020, 13:34 IST
ಪಿಣರಾಯಿ ವಿಜಯನ್‌ 
ಪಿಣರಾಯಿ ವಿಜಯನ್‌    

ತಿರುವನಂತಪುರ: ಕೋಯಿಕ್ಕೋಡ್‌ನಲ್ಲಿ ನಡೆದ ವಿಮಾನ ಅಪಘಾತ ಸ್ಥಳಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಕ್ಷಣವೇ ದೌಡಾಯಿಸಿ ಮೃತರ ಕುಟುಂಬದವರನ್ನು, ಗಾಯಾಳುಗಳನ್ನು ಭೇಟಿಯಾಗಿ, ₹10 ಲಕ್ಷ ಪರಿಹಾರ ಘೋಷಿಸಿರುವುದು ಇದೀಗ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ಮುನ್ನಾರ್‌ನಲ್ಲಿ ನಡೆದಭೂಕುಸಿತದಲ್ಲಿ ಮೃತಪಟ್ಟ ಜನರಿಗೆ ಕೇವಲ ₹5 ಲಕ್ಷ ಪರಿಹಾರ ಘೋಷಿಸಿರುವುದು, ಪಕ್ಷಪಾತದ ಕಿಡಿ ಹೊತ್ತಿಸಿದೆ. ‘ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇಷ್ಟೇ ಪರಿಹಾರವನ್ನು ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬಕ್ಕೂ ನೀಡಬೇಕು’ ಎಂದು ವಿರೋಧ ಪಕ್ಷದ ನಾಯಕ ರಮೇಶ್‌ ಚೆನ್ನಿತ್ತಲ ಭಾನುವಾರ ಹೇಳಿದರು.

‘ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡುವಾಗ, ಆಯ್ಕೆ ಮಾಡುವಂತ ಮನೋಭಾವ ಇರಬಾರದು’ ಎಂದು ಭೂಕುಸಿತ ಸಂಭವಿಸಿದ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ವಿದೇಶಾಂಗ ಇಲಾಖೆ ರಾಜ್ಯ ಖಾತೆ ಸಚಿವ ವಿ.ಮುರುಳೀಧರನ್‌ ಹೇಳಿದರು.

ADVERTISEMENT

ವಿವಾದ ತೀವ್ರತೆ ಪಡೆಯುತ್ತಿದ್ದಂತೆ ಸ್ಪಷ್ಟನೆ ನೀಡಿರುವ ವಿಜಯನ್‌, ಭೂಕುಸಿತದಿಂದ ಮೃತಪಟ್ಟವರ ಕುಟುಂಬಕ್ಕೆ ಘೋಷಿಸಿರುವುದು ಕೇವಲ ಮಧ್ಯಂತರ ಪರಿಹಾರವಷ್ಟೇ. ದುರುಂತ ನಡೆದ ಪ್ರದೇಶಕ್ಕೆ ಇಬ್ಬರು ಸಚಿವರನ್ನು ನಿಯೋಜಿಸಲಾಗಿದೆ. ರಕ್ಷಣಾ ಕಾರ್ಯ ಮುಂದುವರಿದಿದೆ’ ಎಂದು ತಿಳಿಸಿದ್ದಾರೆ.

ಪೆಟ್ಟಿಮುಡಿ ಪ್ರದೇಶದಲ್ಲಿ ನಡೆದ ಭೂಕುಸಿತದಲ್ಲಿ ಇಲ್ಲಿಯವರೆಗೂ 28 ಜನರು ಮೃತಪಟ್ಟಿದ್ದು, 40ಕ್ಕೂ ಅಧಿಕ ಜನರು ಕಾಣೆಯಾಗಿದ್ದಾರೆ. ವಿಮಾನ ಅಪಘಾತದಲ್ಲಿ 18 ಪ್ರಯಾಣಿಕರು ಮೃತಪಟ್ಟು, 14 ಜನ ಗಂಭೀರವಾಗಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.