ADVERTISEMENT

ಹಿಜಾಬ್‌: ವಾದಗಳ ಸಿಂಧುತ್ವ ಪ್ರಶ್ನಿಸಿದ ಸುಪ್ರೀಂ ಕೋರ್ಟ್‌

ಉಡುಗೆ ತೊಡುಗೆ ಧರಿಸುವ ಹಕ್ಕನ್ನು ಅತಾರ್ತಿಕ ಮಟ್ಟಕ್ಕೆ ಕೊಂಡೊಯ್ಯಲು ಆಗದು: ಪೀಠ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 18:49 IST
Last Updated 7 ಸೆಪ್ಟೆಂಬರ್ 2022, 18:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದನ್ನು ಸಮರ್ಥಿಸುವ ವಾದಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ಬುಧವಾರ ಪ್ರಶ್ನಿಸಿದೆ. ’ಉಡುಗೆ ತೊಡುಗೆ ಧರಿಸುವ ಹಕ್ಕನ್ನು ಅತಾರ್ತಿಕ ಮಟ್ಟಕ್ಕೆ ಕೊಂಡೊಯ್ಯಲು ಆಗದು. ಇದು ಕೇವಲ ಒಂದು ಸಮುದಾಯದ ಸಮಸ್ಯೆ. ಇತರರು ವಸ್ತ್ರಸಂಹಿತೆಯನ್ನು ಪಾಲಿಸುತ್ತಿದ್ದಾರೆ’ ಎಂದು ಹೇಳಿದೆ.

‘ಸರ್ಕಾರಿ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ನಿರ್ದೇಶಿಸಬೇಕು' ಎಂದು ಕೋರಲಾಗಿದ್ದ ಎಲ್ಲ ವೈಯಕ್ತಿಕ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಾರ್ಚ್‌ 15ರಂದು ಕರ್ನಾಟಕ ಹೈಕೋರ್ಟ್‌ ಸಾರಾಸಗಟಾಗಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ 22 ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಸೋಮವಾರದಿಂದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ‍ಪೀಠ ಆರಂಭಿಸಿದೆ.

ಎರಡನೇ ದಿನದ ವಿಚಾರಣೆಯ ವೇಳೆ ಮುಸ್ಲಿಂ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್‌, ‘ಸಂವಿಧಾನದ19ನೇ (1) (ಎ) (ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಪರಿಚ್ಛೇದದ ಅನುಸಾರ, ಅಭಿವ್ಯಕ್ತಿ ಸ್ವಾತಂತ್ರ್ಯದ ಅನುಸಾರ ತಾವು ಧರಿಸುವ ಉಡುಪನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಎಲ್ಲರಿಗೆ ಇದೆ’ ಎಂದರು. ಈ ವಾದವನ್ನು ಒಪ್ಪದ ನ್ಯಾಯಮೂರ್ತಿಗಳು, ‘ಈ ವಾದವನ್ನು ನಾವು ಅತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಆಗದು. ನೀವು ಉಡುಪು ಧರಿಸುವ ಹಕ್ಕನ್ನು ಮೂಲಭೂತ ಹಕ್ಕು ಎಂದು ವಾದಿಸಿದರೆ, ಉಡುಪು ಧರಿಸದೆ ಇರುವುದು ಸಹ ಮೂಲಭೂತ ಹಕ್ಕು ಆಗುತ್ತದೆ’ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ದೇವದತ್‌ ಕಾಮತ್‌, ‘ನಾನು ಇಲ್ಲಿ ಕ್ಲೀಷೆಯ ವಾದ ಮಂಡಿಸುತ್ತಿಲ್ಲ. ಇಲ್ಲಿ ನಾನು ಒಂದು ಅಂಶದ ಸಮರ್ಥನೆ ಮಾಡುತ್ತಿದ್ದೇನೆ. ಉಡುಪು ಧರಿಸದೆ ಶಾಲೆಗಳಿಗೆ ಯಾರೂ ಬರುತ್ತಿಲ್ಲ’ ಎಂದರು.

ಆಗ ನ್ಯಾಯಪೀಠ, ‘ಉಡು‍ಪು ಧರಿಸುವ ಹಕ್ಕನ್ನು ಯಾರೂ ತಿರಸ್ಕರಿಸುತ್ತಿಲ್ಲ’ ಎಂದಿತು.

ವಾದ ಮುಂದುವರಿಸಿದ ದೇವದತ್‌ ಕಾಮತ್‌, ‘ಎಲ್ಲ ಧರ್ಮಗಳು ಒಂದೇ ಎಂಬುದು ಸಂವಿಧಾನದ ನಿಲುವು’ ಎಂದರು. ಅರುಣಾ ರಾಯ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿ, ‘ದೇವರು ಇರುವುದು ಒಬ್ಬನೇ. ಆದರೆ, ಸುಶಿಕ್ಷಿತ ಜನರು ಅದನ್ನು ವಿಭಿನ್ನವಾಗಿ ವಿವರಿಸುತ್ತಾರೆ’ ಎಂದು ಪೀಠದ ಗಮನ ಸೆಳೆದರು. ಆಗ ನ್ಯಾಯಪೀಠವು, ‘ಎಲ್ಲ ಧರ್ಮಗಳು ಇದನ್ನು ಒಪ್ಪುತ್ತವೆಯೇ. ಈ ಯೋಚನಾ ಲಹರಿಯನ್ನು ಎಲ್ಲ ಧರ್ಮಗಳಲ್ಲಿ ಅಂಗೀಕರಿಸಲಾಗಿದೆಯೇ’ ಎಂದು ಪ್ರಶ್ನಿಸಿತು. ಇದಕ್ಕೆ ‍ಪ್ರತಿಕ್ರಿಯಿಸಿದ ಕಾಮತ್‌, ತಾವು ಕೇವಲ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸುತ್ತಿರುವುದಾಗಿ ಹೇಳಿದರು.

ವಿದ್ಯಾರ್ಥಿಗಳು ಶಿಕ್ಷಣದ ಹಕ್ಕನ್ನು ಪಡೆಯಲು ಅವರ ಮೂಲಭೂತ ಹಕ್ಕುಗಳನ್ನು ಬಲಿ ಕೊಡಬೇಕೇ ಎಂದು ಪ್ರಶ್ನಿಸಿದ ಕಾಮತ್‌, ‘ವಿದ್ಯಾರ್ಥಿಗಳು ಧರಿಸುವುದು ಬುರ್ಖಾ ಅಲ್ಲ. ಅವರು ಧರಿಸುವುದು ಹಿಜಾಬ್‌. ಇದು ಕೇವಲ ತಲೆಯ ಮೇಲೆ ಹಾಕುವ ಸ್ಕಾರ್ಪ್‌. ಇತರ ಧರ್ಮದ ವಿದ್ಯಾರ್ಥಿಗಳು ಕೂಡ ತಿಲಕ, ರುದ್ರಾಕ್ಷಿ, ಕ್ರಾಸ್‌ ಇತ್ಯಾದಿಗಳನ್ನು ಧರಿಸುತ್ತಿದ್ದಾರೆ’ ಎಂದು ಗಮನ ಸೆಳೆದರು.

ಆಗ ನ್ಯಾಯಮೂರ್ತಿಗಳು, ಉಡುಪಿನೊಳಗೆ ಏನು ಧರಿಸುತ್ತಾರೆ ಎಂಬುದರ ಬಗ್ಗೆ ಇಲ್ಲಿ ಯಾರೂ ತಲೆ ಕೆಡಿಸಿಕೊಂಡಿಲ್ಲ ಎಂದರು.

ದೇವದತ್‌ ಕಾಮತ್‌, ‘ನಮ್ಮ ಸಂವಿಧಾನ ಸಕಾರಾತ್ಮಕ ಜಾತ್ಯತೀತತೆಯನ್ನು ಸಾರುತ್ತದೆ. ಯಾವುದೇ ಧಾರ್ಮಿಕ ಭಾವನೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಅವಕಾಶ ನೀಡದ ಫ್ರಾನ್ಸ್‌ ನಂತಹ ದೇಶಗಳಲ್ಲಿ ಜಾರಿಯಲ್ಲಿರುವ ನಕಾರಾತ್ಮಕ ಜಾತ್ಯತೀತತೆ ಅಲ್ಲ’ ಎಂದು ವಾದಿಸಿದರು.

ಬಳಿಕ ಪ್ರಕರಣದ ವಿಚಾರಣೆಯನ್ನು ಗುರುವಾರ ಬೆಳಿಗ್ಗೆ 11.30ಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.