ADVERTISEMENT

Himachal Pradesh Results: ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ, ಬಿಜೆಪಿಗೆ ಹಿನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2022, 14:25 IST
Last Updated 8 ಡಿಸೆಂಬರ್ 2022, 14:25 IST
   

ಶಿಮ್ಲಾ:ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಎಲ್ಲ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ.ಕಾಂಗ್ರೆಸ್‌ಸ್ಪಷ್ಟ ಬಹುಮತ ಸಾಧಿಸಿ, ಸ್ವಂತ ಬಲದಿಂದ ಅಧಿಕಾರಕ್ಕೇರುವ ಸಿದ್ಧತೆ ಆರಂಭಿಸಿದೆ.

68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಗೆ ಡಿಸೆಂಬರ್‌ 1ರಂದು ಚುನಾವಣೆ ನಡೆದಿತ್ತು. ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟ್ಟಿತ್ತು.

ಕಣಿವೆ ರಾಜ್ಯದಲ್ಲಿ1985ರಿಂದ ಈಚೆಗೆ ಒಮ್ಮೆ ಅಧಿಕಾರಕ್ಕೇರಿದ ಪಕ್ಷ ಮತ್ತೊಮ್ಮೆ ಬಹುಮತ ಸಾಧಿಸಿ ಸರ್ಕಾರ ರಚಿಸಿದ ಉದಾಹರಣೆ ಇಲ್ಲ. ಇಲ್ಲಿನ ಜನರು ಮತ್ತೆ ಅದೇ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.

ADVERTISEMENT

ಕಾಂಗ್ರೆಸ್‌ ಒಟ್ಟು 40 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.ಬಿಜೆಪಿ 25 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ‌ಮೂರು ಕ್ಷೇತ್ರಗಳು ಇತರರ ಪಾಲಾಗಿವೆ.

ಈ ನಡುವೆ ಕಾಂಗ್ರೆಸ್‌ಗೆ ಬಿಜೆಪಿಯಿಂದ ಶಾಸಕರ ಖರೀದಿ ಭೀತಿ ಶುರುವಾಗಿದೆ. ಹೀಗಾಗಿಹಿಮಾಚಲ ಪ್ರದೇಶದ ಚುನಾವಣಾ ವೀಕ್ಷಕರಾದ ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್,ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ, ಹಿಮಾಚಲ ಪ್ರದೇಶದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ ಸೇರಿದಂತೆ ಹಿರಿಯ ನಾಯಕರನ್ನು ಕಾಂಗ್ರೆಸ್ ಹೈಕಮಾಂಡ್ ಚಂಡೀಗಢಕ್ಕೆ ಕಳುಹಿಸಿದೆ ಎಂದು ಎಎನ್‌ಐ ಟ್ವೀಟಿಸಿದೆ.

ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಬಿಜೆಪಿ ಯತ್ನವನ್ನು ತಡೆಯುವ ಕಾರ್ಯಾಚರಣೆ ನಡೆಯುತ್ತಿದೆ. ನಾನು ಮತ್ತು ರಾಜೀವ್ ಶುಕ್ಲಾ ಚಂಡೀಗಢಕ್ಕೆ ತೆರಳುತ್ತಿದ್ದೇವೆ. ಭೂಪಿಂದರ್ ಸಿಂಗ್ ಹೂಡಾ ಈಗಾಗಲೇ ಅಲ್ಲಿಗೆ ತೆರಳಿದ್ದಾರೆ ಎಂದು ಬಘೇಲ್ ತಿಳಿಸಿದ್ದಾರೆ.

‘ಈ ವಿಜಯಕ್ಕೆ ಹಿಮಾಚಲ ಪ್ರದೇಶದ ಎಲ್ಲ ಮತದಾರರಿಗೆ ಹೃದಯ ಪೂರ್ವಕ ಧನ್ಯವಾದ ಹೇಳುತ್ತೇನೆ. ಕಾಂಗ್ರೆಸ್‌ನಎಲ್ಲ ಕಾರ್ಯಕರ್ತರು ಮತ್ತು ನಾಯಕರಿಗೆ ಶುಭಾಶಯ. ಈ ಜಯದ ಹಿಂದೆ ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಇದೆ’ ಎಂದು ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ.

'ಚುನಾವಣೆ ಸಂದರ್ಭ ಜನರಿಗೆ ನೀಡಲಾದ ಎಲ್ಲ ಆಶ್ವಾಸನೆಗಳನ್ನು ಆದಷ್ಟು ಬೇಗ ಈಡೇರಿಸುತ್ತೇವೆ ಎಂದು ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ' ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.