ADVERTISEMENT

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: ಸತ್ತವರ ಸಂಖ್ಯೆ 15ಕ್ಕೆ ಏರಿಕೆ

ಪಿಟಿಐ
Published 13 ಆಗಸ್ಟ್ 2021, 5:35 IST
Last Updated 13 ಆಗಸ್ಟ್ 2021, 5:35 IST
ಹಿಮಾಚಲ ಪ್ರದೇಶದ ಕಿನ್ನೌರ ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಮಣ್ಣಿನ ಅವಶೇಷಗಳಡಿ ಸಿಲುಕಿರುವ ವಾಹನವೊಂದು ಸಿಲುಕಿರುವ ದೃಶ್ಯ
ಹಿಮಾಚಲ ಪ್ರದೇಶದ ಕಿನ್ನೌರ ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಮಣ್ಣಿನ ಅವಶೇಷಗಳಡಿ ಸಿಲುಕಿರುವ ವಾಹನವೊಂದು ಸಿಲುಕಿರುವ ದೃಶ್ಯ   

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿದ್ದು, ಶುಕ್ರವಾರ ಮಣ್ಣಿನಡಿಯಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ ಎಂದು ವಿಪತ್ತು ನಿರ್ವಹಣೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಚೌರಾ ಗ್ರಾಮದ ಬಳಿ ಬುಧವಾರ ಸಂಭವಿಸಿದ ಭೂ ಕುಸಿತದಲ್ಲಿ ಇನ್ನೂ 15 ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ರಕ್ಷಣಾ ಕಾರ್ಯಪಡೆಯವರು ಶುಕ್ರವಾರ ಬೆಳಿಗ್ಗೆಯಿಂದ ಪುನಃ ಶೋಧ ಕಾರ್ಯ ಆರಂಭಿಸಿದ್ದಾರೆ.

ರಕ್ಷಣಾ ಕಾರ್ಯಪಡೆಯವರು ಬುಧವಾರ ಬೆಳಿಗ್ಗೆ ನಡೆಸಿದ ಶೋಧಕಾರ್ಯದಲ್ಲಿ ಭೂ ಕುಸಿತದ ಸ್ಥಳದಿಂದ 10 ಮೃತದೇಹಗಳನ್ನು ಹೊರತೆಗೆದರು. ಗುರವಾರ ನಾಲ್ಕು ಶವಗಳು ಪತ್ತೆಯಾದವು. ಈ ನಡುವೆ ಬುಧವಾರದಂದು 13 ಜನರನ್ನು ರಕ್ಷಿಸಲಾಯಿತು.

ADVERTISEMENT

ಅಧಿಕಾರಿಗಳು ಗುರುವಾರ ರಾತ್ರಿ ಶೋಧಕಾರ್ಯವನ್ನು ಸ್ಥಗಿತಗೊಳಿಸಿದ್ದರು. ‘ಶುಕ್ರವಾರ ಬೆಳಿಗ್ಗೆ 5.30ರಿಂದ ಪುನಃ ಕಾರ್ಯಾಚರಣೆಯನ್ನು ಆರಂಭಿಸಿದ್ದೇವೆ‘ ಎಂದು ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಯ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ತಿಳಿಸಿದ್ದಾರೆ.

‘ಒಂದು ಬೊಲೆರೊ ಮತ್ತು ಅದರೊಳಗಿದ್ದ ಪ್ರಯಾಣಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ವಾಹನವು ಮಣ್ಣಿನ ಅವಶೇಷಗಳೊಂದಿಗೆ ಉರುಳಿಬಿದ್ದಿರುವ ಸಾಧ್ಯತೆಯಿದೆ‘ ಎಂದು ಮೊಖ್ತಾ ಹೇಳಿದರು.

ಭೂ ಕುಸಿತವಾದ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌), ಭಾರತ-ಟಿಬೆಟ್‌ ಗಡಿ ಪೋಲಿಸ್ (ಐಟಿಬಿಪಿ), ಸ್ಥಳೀಯ ಪೊಲೀಸ್ ಮತ್ತು ಹೋಮ್ ಗಾರ್ಡ್ ಸದಸ್ಯರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.