ADVERTISEMENT

ಹಿಮಾಚಲ ಪ್ರದೇಶ: ಸ್ಥಿರ ಸರ್ಕಾರ ಅಗತ್ಯ- ಮೋದಿ ಪ್ರತಿಪಾದನೆ

ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ಚುನಾವಣಾ ಪ್ರಚಾರ; ಕಾಂಗ್ರೆಸ್‌ಗೆ ತರಾಟೆ

ಪಿಟಿಐ
Published 5 ನವೆಂಬರ್ 2022, 21:53 IST
Last Updated 5 ನವೆಂಬರ್ 2022, 21:53 IST
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸುಂದರ್‌ ನಗರದಲ್ಲಿ ಬಿಜೆಪಿ ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗಿಂಡಿದ್ದ ಜನ–ಪಿಟಿಐ ಚಿತ್ರ
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸುಂದರ್‌ ನಗರದಲ್ಲಿ ಬಿಜೆಪಿ ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗಿಂಡಿದ್ದ ಜನ–ಪಿಟಿಐ ಚಿತ್ರ   

ಸುಂದರ್‌ನಗರ, ಸೋಲನ್ (ಹಿಮಾಚಲ ಪ್ರದೇಶ): ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನೇ ಉಳಿಸಿಕೊಳ್ಳಬೇಕು ಎಂದು ಹಿಮಾಚಲ ಪ್ರದೇಶದ ಜನರು ಮನಸ್ಸಿನಲ್ಲಿ ನಿರ್ಧರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.

ಮಂಡಿ ಜಿಲ್ಲೆಯ ಸುಂದರ್‌ನಗರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕ್ಷಿಪ್ರಗತಿಯ ಅಭಿವೃದ್ಧಿ ಹಾಗೂ ಸ್ಥಿರ ಸರ್ಕಾರ ರಾಜ್ಯದ ಇಂದಿನ ಅಗತ್ಯಗಳು ಎಂದು ಅವರು ಪ್ರತಿಪಾದಿಸಿದರು.

‘ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ವಿಶಿಷ್ಟವಾದುದು. ನ.12ರಂದು ಜನರು ಚಲಾಯಿಸುವ ಮತ ಮುಂದಿನ ಐದು ವರ್ಷಗಳ ಅವಧಿಯ ಸರ್ಕಾರವನ್ನಷ್ಟೇ ಆರಿಸುವುದಿಲ್ಲ. ಜನರ ಚಲಾಯಿಸುವ ಒಂದೊಂದು ಮತವೂ ರಾಜ್ಯದ ಮುಂದಿನ 25 ವರ್ಷಗಳ ಪ್ರಗತಿಯ ಹಾದಿಯನ್ನು ನಿರ್ಧರಿಸಲಿದೆ’ ಎಂದು ಪ್ರಧಾನಿ ಹೇಳಿದರು.

ADVERTISEMENT

‘ನಿಮ್ಮ ಒಂದೊಂದು ಮತವನ್ನೂ ಕಮಲಕ್ಕೆ ನೀಡಬೇಕು. ಇದೇ ನೀವು ನನಗೆ ಮಾಡುವ ಆಶೀರ್ವಾದ’ ಎಂದರು.

‘ಭಾರತವು 100ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುವ ಹೊತ್ತಿಗೆ ಹಿಮಾಚಲ ಪ್ರದೇಶ ರಾಜ್ಯ ರಚನೆಯಾಗಿ 100 ವರ್ಷಗಳು ತುಂಬಲಿವೆ. ಹೀಗಾಗಿ ಮುಂದಿನ 25 ವರ್ಷಗಳು ಅತ್ಯಂತ ನಿರ್ಣಾಯಕ’ ಎಂದು ಮೋದಿ ಹೇಳಿದರು. ‘ಬಿಜೆಪಿಯು ಸ್ಥಿರತೆ, ಸೇವಾಭಾವ, ಸಮಚಿತ್ತಕ್ಕೆ ಹೆಸರಾಗಿದ್ದು, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಎಲ್ಲ ಕಾರಣಗಳಿಂದ ಹಿಮಾಚಲ ಪ್ರದೇಶದ ಜನರು ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಆರಿಸಬೇಕು’ ಎಂದು ಅವರು ಕರೆ ನೀಡಿದರು.

ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳ (ಎಎಪಿ) ವಿರುದ್ಧ ಅವರು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಭ್ರಷ್ಟಾಚಾರ ಹಾಗೂ ವಂಶಾಡಳಿತದ ಪಕ್ಷ ಹಾಗೂ ಎಎಪಿ ಅತ್ಯಂತ ಭ್ರಷ್ಟ ಪಕ್ಷ ಎಂದು ಆರೋಪಿಸಿದರು.

‘ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸ್ವಾರ್ಥಿಗಳು ಜನರು ಹಾಗೂ ಪಟ್ಟಭದ್ರ ಹಿತಾಸಕ್ತಿ ಗುಂಪಿನವರ ಸಂಖ್ಯೆ ಹೆಚ್ಚಳವಾಗಿತ್ತು. ಹಿಮಾಚಲ ಪ್ರದೇಶ ಸೇರಿದಂತೆ ದೇಶದಲ್ಲಿ ಅಸ್ಥಿರತೆ ಉಂಟು ಮಾಡುವುದು ಅವರ ಉದ್ದೇಶವಾಗಿತ್ತು’ ಎಂದು ಆರೋಪಿಸಿದರು.

ಗೋವಾ ಹಾಗೂ ಉತ್ತರಾಖಂಡ ಚುನಾವಣೆಗಳನ್ನು ಉಲ್ಲೆಖಿಸಿದ ಅವರು, ‘ಸಣ್ಣ ರಾಜ್ಯಗಳು ಅಸ್ಥಿರತೆಯಿಂದ ನಲುಗುತ್ತಿದ್ದವು. ಆದರೆ, ಎರಡೂ ರಾಜ್ಯ ಸರ್ಕಾರಗಳ ಕೆಲಸಗಳನ್ನು ನೋಡಿ ಮತದಾರರು ಮತ್ತೊಂದು ಅವಧಿಗೆ ಆಯ್ಕೆ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲೂ ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಯನ್ನು ಆಯ್ಕೆ ಮಾಡಿ’ ಎಂದು ಮನವಿ ಮಾಡಿದರು.

‘ಕಡಿಮೆ ಪ್ರಾತಿನಿಧ್ಯದ ಕಾರಣಕ್ಕೆ ರಾಜ್ಯ ನಿರ್ಲಕ್ಷ್ಯ’:ಲೋಕಸಭೆಯಲ್ಲಿ ಕಡಿಮೆ ಸಂಖ್ಯೆಯ ಸಂಸದರ ಪ್ರಾತಿನಿಧ್ಯ ಹೊಂದಿದೆ ಎಂಬ ಕಾರಣಕ್ಕೆ ಹಿಮಾಚಲ ಪ್ರದೇಶವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದರು. ‘ಚಿಕ್ಕ ರಾಜ್ಯ ಎಂಬ ಕಾರಣಕ್ಕೆ ಹಿಮಾಚಲವು ಅವಗಣನೆಗೆ ಒಳಗಾಗಿದೆ. ಮೂರರಿಂದ ನಾಲ್ವರು ಸಂಸದರನ್ನು ಲೋಕಸಭೆಗೆ ಕಳುಹಿಸುವುದು ಅಷ್ಟೇನೂ ಮಹತ್ವದ್ದಾಗಿಕಾಂಗ್ರೆಸ್‌ಗೆ ಕಾಣುತ್ತಿಲ್ಲ’ ಎಂದು ಅವರು ಆರೋಪಿಸಿದರು.

‘ಸತ್ಯವಂತರ’ ಬಗ್ಗೆ ಎಚ್ಚರ: ಮೋದಿ

ತಮ್ಮನ್ನು ಅಪ್ಪಟ ಸತ್ಯವಂತರು (ಕಟ್ಟರ್ ಇಮಾಂದಾರ್) ಎಂದು ಬಿಂಬಿಸಿಕೊಳ್ಳುವವರು ಅತ್ಯಂತ ಭ್ರಷ್ಟರೂ, ಸಮಾಜವನ್ನು ಒಡೆಯುವ ಸಂಚು ರೂಪಿಸುವವರೂ ಆಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು. ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.