ಅಮಿತ್ ಶಾ
– ಪಿಟಿಐ ಚಿತ್ರ
ಗಾಂಧಿನಗರ: ಹಿಂದಿ ಭಾಷೆ ಕೇವಲ ಜನಸಾಮಾನ್ಯರು ಮಾತನಾಡುವ ಭಾಷೆಯಾಗಬಾರದು. ಬದಲಿಗೆ ಹಿಂದಿ ಭಾಷೆ ಆಡಳಿತ, ನ್ಯಾಯಾಂಗ, ಪೊಲೀಸ್, ವಿಜ್ಞಾನ– ತಂತ್ರಜ್ಞಾನದ ಭಾಷೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗಾಂಧಿನಗರದಲ್ಲಿ ನಡೆಯುತ್ತಿರುವ ರಾಜ್ಯಭಾಷಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದಿಯಲ್ಲಿ ಆಡಳಿತ, ನ್ಯಾಯಾಂಗ, ಪೊಲೀಸ್, ವಿಜ್ಞಾನ ತಂತ್ರಜ್ಞಾನದ ಸಂವಹನ ಸಾಧ್ಯವಾದರೆ ದೇಶದಾದ್ಯಂತ ಸಾರ್ವಜನಿಕ ಸಂಪರ್ಕ ಸುಲಭವಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ರಾಜ್ಯಭಾಷೆಗಳೊಂದಿಗೆ ಹಿಂದಿ ಸಂಘರ್ಷ ಹೊಂದಲು ಬಯಸುವುದಿಲ್ಲ. ದೇಶದ ಅನೇಕ ಮಹನಿಯರು ಹಿಂದಿ ಭಾಷೆಯ ಮಹತ್ವ ಅರ್ಥ ಮಾಡಿಕೊಂಡು ಅದನ್ನು ಮುನ್ನೆಲೆಗೆ ತಂದರು ಎಂದು ಹೇಳಿದರು.
ಮನೆಯಲ್ಲಿ ತಂದೆ–ತಾಯಿ, ಪೋಷಕರು ಮಕ್ಕಳೊಂದಿಗೆ ತಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಬೇಕು. ಆ ಮೂಲಕ ಭಾಷೆಗಳನ್ನು ಅಮರವಾಗಿಸಬೇಕು ಎಂದು ಸಲಹೆ ನೀಡಿದ್ದಾರೆ.
ನಮ್ಮ ಸರ್ಕಾರ ಕೇವಲ ಹಿಂದಿ ಅಲ್ಲದೇ ಇತರ ರಾಜ್ಯಭಾಷೆಗಳ ಬೆಳವಣಿಗೆಗೆ ಶ್ರಮಿಸುತ್ತಿದೆ. ಅದಕ್ಕಾಗಿಯೇ ಇಂಡಿಯನ್ ಲಾಂಗ್ವೇಜಸ್ ಡಿಪಾರ್ಟ್‌ಮೆಂಟ್ ತೆರೆದಿದೆ ಎಂದು ಹೇಳಿದರು.
ಇವತ್ತಿನ ದಿನಗಳಲ್ಲಿ ಗುಜರಾತ್‌ನಲ್ಲಿ ಗುಜರಾತಿ–ಹಿಂದಿ ಸಮಾನವಾಗಿ ಬೆಳೆದಿವೆ. ಇಲ್ಲಿನ ಜನ ಎರಡಕ್ಕೂ ಪ್ರಾಮುಖ್ಯತೆ ಕೊಟ್ಟಿರುವುದರಿಂದ ಅವರು ಇಡೀ ದೇಶದಲ್ಲಿಯೇ ವ್ಯಾಪಾರ ವ್ಯವಹಾರ ಮಾಡಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ದೇಶದ ಭಾಷೆ ಸಂವಹನ ಭಾಷೆಯಾಗದಿದ್ದರೆ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕೆ ಅರ್ಥವಿಲ್ಲ ಎಂದು ಅವರು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.