ADVERTISEMENT

ಮಹಾರಾಷ್ಟ್ರ: ತ್ರಿಭಾಷಾ ಸೂತ್ರದ ಆದೇಶ ವಾಪಸ್‌ 

ಪಿಟಿಐ
Published 29 ಜೂನ್ 2025, 16:24 IST
Last Updated 29 ಜೂನ್ 2025, 16:24 IST
ದೇವೇಂದ್ರ ಫಡಣವೀಸ್‌
ದೇವೇಂದ್ರ ಫಡಣವೀಸ್‌   

ಮುಂಬೈ: ಮಹಾರಾಷ್ಟ್ರದ ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆಯ ಭಾಗವಾಗಿ 1ರಿಂದ 5ನೇ ತರಗತಿವರೆಗೆ ಹಿಂದಿಯನ್ನು ಭಾಷೆಯಾಗಿ ಪರಿಚಯಿಸಿದ್ದ ಆದೇಶವನ್ನು ಹಿಂಪಡೆದಿರುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. 

ರಾಜ್ಯ ವಿಧಾನಸಭೆಯ ಮಳೆಗಾಲದ ಅಧಿವೇಶನ ಆರಂಭದ ಹಿಂದಿನ ದಿನ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ವಿರೋಧ ಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಸರ್ಕಾರ ಆದೇಶವನ್ನು ಹಿಂದಕ್ಕೆ ಪಡೆದಿದೆ. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ನೇತೃತ್ವದಲ್ಲಿ ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಫಡಣವೀಸ್‌, ‘ರಾಜ್ಯದಲ್ಲಿ 1ನೇ ತರಗತಿಯಿಂದ ತ್ರಿಭಾಷಾ ಸೂತ್ರ ಅಳವಡಿಕೆ ಕುರಿತು ಸರ್ಕಾರ ಈ ವರ್ಷದ ಏಪ್ರಿಲ್‌ ಮತ್ತು ಜೂನ್‌ನಲ್ಲಿ ಹೊರಡಿಸಿದ್ದ ಆದೇಶಗಳನ್ನು ಹಿಂಪಡೆಯಲು ಸಂಪುಟ ನಿರ್ಧರಿಸಿದೆ. ಅಲ್ಲದೆ ತ್ರಿಭಾಷಾ ಸೂತ್ರ ಅಳವಡಿಕೆ ಕುರಿತು ಪರಿಶೀಲಿಸಲು ಶಿಕ್ಷಣ ತಜ್ಞ ನರೇಂದ್ರ ಜಾಧವ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಯಾವ ತರಗತಿಯಿಂದ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸಬಹುದು ಎಂಬುದರ ಕುರಿತು ಈ ಸಮಿತಿ ಮೂರು ತಿಂಗಳಲ್ಲಿ ಶಿಫಾರಸು ಮಾಡಲಿದೆ. ಸಮಿತಿಯ ಇತರ ಸದಸ್ಯರನ್ನು ಶೀಘ್ರವೇ ನೇಮಿಸಲಾಗುವುದು’ ಎಂದು ಅವರು ವಿವರಿಸಿದರು.

‘ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಆಗಿದ್ದಾಗ ನೇಮಿಸಲಾಗಿದ್ದ ಡಾ. ರಘುನಾಥ್‌ ಮಶೇಲ್ಕರ್‌ ಸಮಿತಿಯು ತ್ರಿಭಾಷಾ ನೀತಿಯ ಭಾಗವಾಗಿ ಮರಾಠಿ, ಇಂಗ್ಲಿಷ್‌ ಮತ್ತು ಹಿಂದಿಯನ್ನು 1ರಿಂದ 12ನೇ ತರಗತಿವರೆಗೆ ಜಾರಿಗೊಳಿಸಬೇಕು ಎಂದು ಶಿಫಾರಸು ಮಾಡಿತ್ತು. ಅದನ್ನು ಠಾಕ್ರೆ ಸ್ವೀಕರಿಸಿದ್ದರು. ಸಂಪುಟದ ಮುಂದೆಯೂ ಇಡಲಾಗಿತ್ತು. ಆಗ ಈ ವರದಿ ತಿರಸ್ಕರಿಸದ ಅವರು, ಈ ನೀತಿಯನ್ನು ಜಾರಿಗೊಳಿಸಲು ಸಮಿತಿಯೊಂದನ್ನೂ ರಚಿಸಿದ್ದರು’ ಎಂದು ಫಡಣವೀಸ್‌ ವಿವರಿಸಿದರು.

‘ಆದರೆ ಈಗ ಠಾಕ್ರೆ ಅವರು ತ್ರಿಭಾಷಾ ಸೂತ್ರವನ್ನು ವಿರೋಧಿಸುತ್ತಿದ್ದಾರೆ. ಹೀಗೆ ಅವರು ಭಾಷೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಅವರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.