ಸೋನಿಯಾ ಗಾಂಧಿ, ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ‘ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಬೆಳವಣಿಗೆಯನ್ನು ತಡೆದು, ಮುಸಲ್ಮಾನರನ್ನು ಒಲೈಸುವ ಉದ್ದೇಶದಿಂದಲೇ, ‘ಹಿಂದೂ ಭಯೋತ್ಪಾದನೆ’ ಕಟ್ಟುಕಥೆಯನ್ನು ಕಾಂಗ್ರೆಸ್ ಸೃಷ್ಟಿಸಿತ್ತು’ ಎಂದು ಬಿಜೆಪಿ ಆರೋಪಿಸಿದೆ.
ಮಾಲೇಗಾಂವ್ ಬಾಂಬ್ ಸ್ಫೋಟದಲ್ಲಿ ಎಲ್ಲಾ ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿದ್ದನ್ನು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಸ್ವಾಗತಿಸಿದ್ದಾರೆ.
‘ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಅವರ ವಿರುದ್ಧ ಆರೋಪ ಸಾಬೀತುಪಡಿಸಲು ಪುರಾವೆಗಳನ್ನು ಸೃಷ್ಟಿಸಿ, ಹಿಂಸೆ ನೀಡಿದ ಪ್ರಾಸಿಕ್ಯೂಸನ್ ಕ್ಷಮೆಕೇಳಬೇಕು’ ಎಂದು ಈ ವೇಳೆ ಒತ್ತಾಯಿಸಿದ್ದಾರೆ.
‘ವೋಟ್ ಬ್ಯಾಂಕ್ ಓಲೈಕೆಗಾಗಿ, ಕಾಂಗ್ರೆಸ್ ಯಾವುದೇ ಹಂತ ತಲುಪಲೂ ಹಿಂಜರಿಯುವುದಿಲ್ಲ. ಈ ಪ್ರಕರಣವು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಪಕ್ಷವು ಅತ್ಯಂತ ವ್ಯವಸ್ಥಿತವಾಗಿ ರೂಪಿಸಿದ ಪಿತೂರಿಯಾಗಿದೆ. ಪ್ರಕರಣದಲ್ಲಿ ಎಲ್ಲ ಖುಲಾಸೆಯಾಗಿರುವುದು ಐತಿಹಾಸಿಕ ದಿನವಾಗಿದೆ’ ಎಂದು ಅವರು ಹೇಳಿದ್ದಾರೆ.
‘ಹಿಂದೂ ಭಯೋತ್ಪಾದಕ ಸಂಘಟನೆಗಳನ್ನು ‘ಕೇಸರಿ ಭಯೋತ್ಪಾದನೆ’ ಎಂದು ಬಿಂಬಿಸುವ ಕಾಂಗ್ರೆಸ್‌ನ ಹೋರಾಟವು ಈ ತೀರ್ಪಿನ ಮೂಲಕ ನೆಲಕಚ್ಚಿದೆ’ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಪ್ರತಿಕ್ರಿಯೆಗೆ ರಾಹುಲ್ ನಿರಾಕರಣೆ: ನ್ಯಾಯಾಲಯದ ತೀರ್ಪಿನ ಕುರಿತಂತೆ ಪ್ರತಿಕ್ರಿಯೆ ನೀಡಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ.
‘ಹಿಂದೂ ಮೂಲಭೂತವಾದಿ ಸಂಘಟನೆಗಳು ಎಲ್‌ಇಟಿಗಿಂತಲೂ ಅಪಾಯಕಾರಿ ಎಂದು 2010ರಲ್ಲಿ ರಾಹುಲ್ ಗಾಂಧಿ ಅವರು ಅಮೆರಿಕದ ರಾಯಭಾರಿಯ ಮುಂದೆ ತಿಳಿಸಿದ್ದರು ಎಂದು ‘ವಿಕಿಲೀಕ್ಸ್’ ಬಹಿರಂಗಪಡಿಸಿತ್ತು. ಈಗ ಆ ವಾದವು ಸಂಪೂರ್ಣವಾಗಿ ನೆಲಕಚ್ಚಿದ್ದು, ಸತ್ಯ ವಿಚಾರದಿಂದ ಅವರು ದೂರ ಓಡಿಹೋಗುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಈ ಕುರಿತು ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ದೇಶದ ಜನತೆ ಮುಂದೆ ಕ್ಷಮೆಯಾಚಿಸಬೇಕು’ ಎಂದು ಈ ವೇಳೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.