ADVERTISEMENT

ಮುಸ್ಲಿಮರ ಸ್ಮಶಾನಕ್ಕೆ ಭೂಮಿ ಉಡುಗೊರೆ ನೀಡಿದ ಹಿಂದೂಗಳು

0.79 ಎಕರೆ ನೀಡಿದ ಹಿಂದೂಗಳು

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 4:32 IST
Last Updated 27 ಜೂನ್ 2019, 4:32 IST
   

ಫೈಜಾಬಾದ್ (ಪಿಟಿಐ): ಉತ್ತರ ಪ್ರದೇಶದ ಫೈಜಾಬಾದ್‌ ಜಿಲ್ಲೆಯ ಬೆಲರಿಖಾನ್ ಗ್ರಾಮದಲ್ಲಿ ಮುಸ್ಲಿಮರ ಸ್ಮಶಾನಕ್ಕಾಗಿ ಹಿಂದೂಗಳು ಭೂಮಿ ಉಡುಗೊರೆ ನೀಡಿದ್ದಾರೆ.

ಸ್ಮಶಾನದ ಪಕ್ಕದಲ್ಲಿರುವ ಸ್ಥಳದಲ್ಲಿ ಆಗಾಗ ಮುಸ್ಲಿಮರು ಶವಗಳನ್ನು ಹೂಳುತ್ತಿದ್ದರು. ಈ ಸ್ಥಳ ಹಿಂದೂ ಸಮುದಾಯಕ್ಕೆ ಸೇರಿದ್ದಾಗಿದ್ದರಿಂದ ಎರಡೂ ಸಮುದಾಯದವರ ನಡುವೆ ಆಗಾಗ ಸಂಘರ್ಷ ಉಂಟಾಗುತ್ತಿತ್ತು.

ಈಗ ಈ ಸ್ಥಳವನ್ನು ‘ಗೋಸಾಯಿಗಂಜ್ ಕಬ್ರಿಸ್ತಾನ್ (ಶವ ಹೂಳುವ ಸ್ಥಳ) ಸಮಿತಿ’ಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ. ‘ಕಬ್ರಿಸ್ತಾನದ ಪಕ್ಕದಲ್ಲಿದ್ದ ಸ್ಥಳ ದಾಖಲೆ ಪ್ರಕಾರ ಹಿಂದೂಗಳಿಗೆ ಸೇರಿದ್ದಾಗಿತ್ತು. ಕೆಲವೊಮ್ಮೆ ಮುಸ್ಲಿಮರು ನಮಗೆ ಸೇರಿದ ಸ್ಥಳದಲ್ಲಿ ಶವಗಳನ್ನು ಹೂಳುತ್ತಿದ್ದರು. ಇದಕ್ಕೆ ನಾವು ವಿರೋಧಿಸುತ್ತಿದ್ದೆವು. ಆದರೂ ಈ ಪದ್ಧತಿ ಮುಂದುವರಿದಿತ್ತು. ಹಾಗಾಗಿ ಈ ಕ್ರಮ ಕೈಗೊಂಡೆವು’ ಎಂದು ಭೂಮಿ ಹಸ್ತಾಂತರಕ್ಕೆ ಸಹಿ ಹಾಕಿದವರಲ್ಲಿ ಒಬ್ಬರಾದ ಸೂರ್ಯ ಕುಮಾರ್ ಝಿಂಕನ್ ಮಹಾರಾಜ್ ತಿಳಿಸಿದ್ದಾರೆ.

ADVERTISEMENT

‘ಹಿಂದೂ ಸಮುದಾಯದ ಎಂಟು ಮಂದಿ 1.25 ಬಿಗಾ (0.79 ಎಕರೆ) ವಿಸ್ತೀರ್ಣದ ಭೂಮಿಯನ್ನು ಉಡುಗೊರೆ ಕರಾರು ಪತ್ರದ ಮೂಲಕ ಹಸ್ತಾಂತರಿಸಿದ್ದಾರೆ’ ಎಂದು ಉಪ ನೋಂದಣಾಧಿಕಾರಿ ಎಸ್‌.ಬಿ. ಸಿಂಗ್ ತಿಳಿಸಿದ್ದಾರೆ.

‘ಭೂಮಿ ಹಸ್ತಾಂತರಿಸಲುಗೋಸಾಯಿಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಇಂದ್ರಪ್ರತಾಪ್ ತಿವಾರಿ ಅವರು ಮಾಲೀಕರ ಮನವೊಲಿಸಿದರು’ ಎಂದು ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.