ಲಖನೌ: ‘ನನಗೆ ಮತ ಹಾಕದ ಹಿಂದುಗಳ ನರಗಳಲ್ಲಿ ಮುಸ್ಲಿಮರ ರಕ್ತ ಹರಿಯುತ್ತಿದೆ’ಎಂದು ಬಿಜೆಪಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉತ್ತರ ಪ್ರದೇಶದ ಹಿಂದೂ ಯುವವಾಹಿನಿಯ ಮುಖ್ಯಸ್ಥರೂ ಆಗಿರುವ ಸಿಂಗ್ ದೊಮಾರಿಯಾ ಜಂಗ್ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿದ್ದಾರೆ. ಇಲ್ಲಿ 6ನೇ ಹಂತದ ಚುನಾವಣೆಯಲ್ಲಿ ಇಲ್ಲಿ ಮತದಾನ ನಡೆಯಲಿದೆ.
'ಹೇಳಿ, ಮುಸ್ಲಿಮರು ಯಾರಾದರೂ ನನಗೆ ಮತ ಹಾಕುತ್ತಾರಾ? ಜಾಗೃತರಾಗಿರಿ. ಒಂದು ಪಕ್ಷ ಈ ಹಳ್ಳಿಯ ಹಿಂದೂಗಳು ಬೇರೆಯವರನ್ನು ಬೆಂಬಲಿಸಿದರೆ ಅವರ ನರಗಳಲ್ಲಿ ಮುಸ್ಲಿಮರ ರಕ್ತ ಹರಿಯುತ್ತಿರುತ್ತದೆ. ಅವರು ದೇಶದ್ರೋಹಿಗಳು.. ಹತ್ತು ಹಲವು ದೌರ್ಜನ್ಯಗಳ ಬಳಿಕವೂ ಒಬ್ಬ ಹಿಂದು ಬೇರೆಯವರಿಗೆ ಬೆಂಬಲ ನೀಡಿದರೆ ಅವರನ್ನು ಸಮಾಜದಲ್ಲಿ ಮುಖ ತೋರಿಸಲು ಬಿಡಬಾರದು’ಎಂದು ವೈರಲ್ ವಿಡಿಯೊದಲ್ಲಿ ಶಾಸಕರು ಹೇಳಿದ್ದಾರೆ.
ಯಾರಾದರೂ ನನ್ನ ಎಚ್ಚರಿಕೆ ಧಿಕ್ಕರಿಸಿದರೆ, ನಾನು ಯಾರೆಂದು ಅವರಿಗೆ ತೋರಿಸುತ್ತೇನೆ. ರಾಘವೇಂದ್ರ ಸಿಂಗ್ ಯಾರೆಂಬುದನ್ನು ಎಲ್ಲರಿಗೂ ಪರಿಚಯ ಮಾಡುತ್ತೇನೆ. ನಾನು ವೈಯಕ್ತಿಕ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ಹಿಂದು ಸಮುದಾಯವನ್ನು ಅವಮಾನಿಸುವವರನ್ನು ನಾಶ ಮಾಡುತ್ತೇನೆ ಎಂದು ಗುಡುಗಿದ್ದಾರೆ.
ಐದು ದಿನಗಳ ಬಳಿಕ ಹೇಳಿಕೆ ನೀಡಿರುವುದನ್ನು ಒಪ್ಪಿಕೊಂಡಿರುವ ಶಾಸಕರು, ನಾನು ಬೇರೆ ಅರ್ಥದಲ್ಲಿ ಉದಾಹರಣೆಯಾಗಿ ಹಾಗೆ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.