ADVERTISEMENT

ಉಸಿರಾಟದ ಸಮಸ್ಯೆ ಇದ್ದಲ್ಲಿ ಕೋವಿಡ್ ಸೋಂಕಿನ ಸಾಧ್ಯತೆ ಹೆಚ್ಚು

ಐಐಟಿ–ಮದ್ರಾಸ್‌ ಸಂಶೋಧಕರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 13:48 IST
Last Updated 11 ಜನವರಿ 2021, 13:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಉಸಿರನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಕಡಿಮೆ ಉಸಿರಾಟದ ಪ್ರಮಾಣದಿಂದ ಕೊರೊನಾ ವೈರಸ್ ಸೋಂಕಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)–ಮದ್ರಾಸ್‌ನ ಸಂಶೋಧಕರು ಪ್ರತಿಪಾದಿಸಿದ್ದಾರೆ.

ಉಸಿರಾಟದ ಪ್ರಮಾಣ ಕಡಿಮೆ ಇದ್ದಷ್ಟೂ ವೈರಸ್‌ನ ಹನಿಗಳು ಶ್ವಾಸಕೋಶದ ಆಳಕ್ಕೆ ತಲುಪುವ ಸಾಧ್ಯತೆಯೂ ಹೆಚ್ಚಿರುತ್ತದೆ ಎಂದು ಸಂಶೋಧಕರು ತಮ್ಮ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.

ಐಐಟಿ–ಎಂನ ಅನ್ವಯಿಕ ಮೆಕ್ಯಾನಿಕ್ಸ್ ವಿಭಾಗದ ಪ್ರೊ.ಮಹೇಶ್ ಪಂಚಾಗ್ನುಲಾ ಅವರ ನೇತೃತ್ವದಲ್ಲಿ ಸಂಶೋಧಕರಾದ ಅರ್ನಬ್ ಕುಮಾರ್ ಮಲ್ಲಿಕ್ ಮತ್ತು ಸೌಮ್ಯಾಲ್ಯ ಮುಖರ್ಜಿ ಅವರ ತಂಡವು ಸಂಶೋಧನೆಯನ್ನು ಕೈಗೊಂಡಿತ್ತು. ಸಂಶೋಧನೆಯ ಸಾರವು ‘ಫಿಜಿಕ್ಸ್ ಆಫ್ ಫ್ಲುಯಿಡ್ಸ್‌’ ಅಂತರರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ADVERTISEMENT

ಉಸಿರಾಟದ ಪ್ರಮಾಣದ ಏರುಪೇರಿನ ಮಾದರಿಯನ್ನು ಅಧ್ಯಯನಕ್ಕೊಳಪಡಿಸಿದ ತಂಡವು, ಉಸಿರಾಟದ ಪ್ರಮಾಣವು ಕ್ಷೀಣಿಸುತ್ತಿದ್ದಂತೆ ವೈರಸ್‌ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದನ್ನು ಅಧ್ಯಯನದಲ್ಲಿ ಕಂಡುಕೊಂಡಿದೆ.

ಕೆಮ್ಮು ಮತ್ತು ಸೀನುವಿಕೆಯ ಮೂಲಕ ಕೊರೊನಾ ವೈರಸ್ ಸೋಂಕು ಗಾಳಿಯಲ್ಲಿ ಬಹುಬೇಗ ಹರಡುತ್ತದೆ. ವ್ಯಕ್ತಿಯ ಉಸಿರಾಟದ ಪ್ರಮಾಣ ಕಡಿಮೆಯಾದರೆ, ಅಂಥವರ ಶ್ವಾಸಕೋಶಗಳಿಗೆ ವೈರಸ್ ಸುಲಭವಾಗಿ ತಲುಪುವ ಸಾಧ್ಯತೆ ಇರುತ್ತದೆ. ವೈರಸ್‌ ಅನ್ನು ಹೊಂದಿರುವ ಹನಿಗಳು ಶ್ವಾಸಕೋಶಗಳಿಗೆ ಹೇಗೆ ತಲುಪುತ್ತವೆ ಎನ್ನುವುದನ್ನು ಕಂಡುಕೊಳ್ಳಲು ಸಂಶೋಧನಾ ತಂಡ ಕಾರ್ಯತತ್ಪರವಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.