ADVERTISEMENT

ಮರ್ಯಾದೆ ಹತ್ಯೆ ಪ್ರಕರಣ: ಗರ್ಭಿಣಿ ಸೋದರಿ, ಆಕೆ ಪತಿ ಕೊಂದಿದ್ದ ಆರೋಪಿಗೆ ಮರಣದಂಡನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 14:14 IST
Last Updated 16 ಮಾರ್ಚ್ 2022, 14:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಗರ್ಭಿಣಿ ಸೋದರಿ ಮತ್ತು ಆಕೆಯ ಪತಿಯನ್ನು ಕೊಂದ ವ್ಯಕ್ತಿಯೊಬ್ಬನಿಗೆ ಇಲ್ಲಿನ ನ್ಯಾಯಾಲಯ ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೆ.ಎ. ಠಕ್ಕರ್ ಅವರು, ಈ ಪ್ರಕರಣವು 'ಅಪರೂಪದಲ್ಲೇ ಅಪರೂಪದ' ವರ್ಗಕ್ಕೆ ಸೇರಿದೆ. ವಿವಾಹಿತ ದಂಪತಿ ಮತ್ತು ಅವರ ಗರ್ಭದಲ್ಲಿನ ಮಗು ಸೇರಿ ತ್ರಿವಳಿ ಕೊಲೆಗೈದಿರುವ ಅಪರಾಧಿಯು ಮರಣದಂಡನೆಯ ಗರಿಷ್ಠ ಶಿಕ್ಷೆಗೆ ಅರ್ಹನಾಗಿದ್ದಾನೆ ಎಂದಿದ್ದಾರೆ.

ಕುಟುಂಬಕ್ಕೆ ವಿರುದ್ಧವಾಗಿ ವಿವಾಹವಾಗಿದ್ದಕ್ಕೆ ಧ್ವೇಷ ಸಾಧಿಸುತ್ತಿದ್ದ ಹಾರ್ದಿಕ್ ಚಾವ್ಡಾ ಎಂಬಾತ 2018ರ ಸೆಪ್ಟೆಂಬರ್‌ನಲ್ಲಿ ಗರ್ಭಿಣಿಯಾಗಿದ್ದ ತನ್ನ ಸೋದರಿ ತರುಣಾಬೆನ್ (21) ಅವರನ್ನು ಎಂಟು ಬಾರಿ ಮತ್ತು ಆಕೆಯ ಪತಿ ವಿಶಾಲ್ ಪರ್ಮಾರ್ (22) ಅವರನ್ನು 17 ಬಾರಿ ಚಾಕುವಿನಿಂದ ಇರಿದಿದ್ದ.

ADVERTISEMENT

ಅಪರಾಧಿಗೆ ಮರಣದಂಡನೆ ವಿಧಿಸುವಲ್ಲಿನ ಯಾವುದೇ ಸಡಿಲಿಕೆಯು ಜನರನ್ನು ಮರ್ಯಾದೆ ಹತ್ಯೆಗೆ ಪ್ರೇರೇಪಿಸುವ ಮನಸ್ಥಿತಿಯನ್ನು ಉತ್ತೇಜಿಸುತ್ತದೆ. ಹೀಗಾಗಿ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ, ಹಾಗೆ ಮಾಡುವುದರಿಂದ ಸಮಾಜದಲ್ಲಿ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಮತ್ತು ಅವರ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿಗೆ ಧಕ್ಕೆಯುಂಟಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

2018ರ ಸೆ. 26ರಂದು ಮೃತ ವಿಶಾಲ್ ಅವರ ಸಹೋದರ ಲಲಿತ್ ಪರ್ಮಾರ್ ಅವರು ಸಾನಂದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 316 (ಗರ್ಭದಲ್ಲಿನ ಮಗುವಿನ ಸಾವಿಗೆ ಕಾರಣ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಚಾವ್ಡಾನನ್ನು ಬಂಧಿಸಿದ್ದರು.

ತರುಣಾಬೆನ್ ತನ್ನ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ತನ್ನ ಸೋದರನನ್ನು ಮದುವೆಯಾಗಿದ್ದರು. ಆಕೆಯ ಕುಟುಂಬ ಸದಸ್ಯರು ಮದುವೆಯಲ್ಲಿ ಸಂತೋಷವಾಗಿರಲಿಲ್ಲ. ಚಾವ್ಡಾ ಅವರು ಸನಂದ್‌ನ ಜಾಧವ್ ವಾಸ್ ಪ್ರದೇಶದಲ್ಲಿದ್ದ ಅವರ ನಿವಾಸಕ್ಕೆ ಭೇಟಿ ನೀಡಿ ಕೊಲೆ ಮಾಡಿದ್ದರು ಎಂದು ದೂರುದಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.