ADVERTISEMENT

ವಿಪಕ್ಷಗಳ ಸಭೆಯಲ್ಲಿ ಸಕಾರಾತ್ಮಕ ನಿರ್ಧಾರ: ಮಮತಾ ಆಶಯ

ಪಿಟಿಐ
Published 22 ಜೂನ್ 2023, 14:40 IST
Last Updated 22 ಜೂನ್ 2023, 14:40 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಶುಕ್ರವಾರ ನಡೆಯಲಿರುವ ವಿರೋಧ ಪಕ್ಷಗಳ ನಾಯಕರ ಪಟ್ನಾ ಸಭೆಯಿಂದ ಸಕಾರಾತ್ಮಕ ನಿಲುವುಗಳು ಹೊರಹೊಮ್ಮಲಿವೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

2024ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರೋಧಿ ಒಕ್ಕೂಟ ರಚಿಸುವ ಸಂಬಂಧ ಮಾರ್ಗಸೂಚಿ ರೂಪಿಸಲು ವಿರೋಧ ಪಕ್ಷಗಳ ಉನ್ನತ ನಾಯಕರು ಬಿಹಾರ ರಾಜಧಾನಿ ಪಟ್ನಾದಲ್ಲಿ ಸಭೆ ಸೇರುತ್ತಿದ್ದಾರೆ. 

‘ವಿರೋಧ ಪಕ್ಷಗಳ ಸಭೆಯಲ್ಲಿ  ಉತ್ತಮ ಮತ್ತು ಸಾಮೂಹಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಿ ಎನ್ನುವುದು ನಮ್ಮ ಆಶಯ. ದೇಶವನ್ನು ವಿಪತ್ತುಗಳಿಂದ ಪಾರುಮಾಡಲು ಜನತೆ ಬಿಜೆಪಿ ವಿರುದ್ಧ ಮತ ಚಲಾಯಿಸುತ್ತಾರೆಂದು ನಾನು ಭಾವಿಸಿದ್ದೇನೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ 100ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿದೆ. ಶಾಂತಿ ಪುನಃಸ್ಥಾಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಮಣಿಪುರದಲ್ಲಿ ಪರಿಸ್ಥಿತಿಯನ್ನು ಬಿಜೆಪಿ ಕೆಟ್ಟದಾಗಿ ನಿಭಾಯಿಸಿದೆ. ಕೇಸರಿ ಪಕ್ಷದ ನೀತಿಗಳ ಕಾರಣದಿಂದಾಗಿ ಈಶಾನ್ಯ ರಾಜ್ಯವು ಕುದಿಯುತ್ತಿದೆ ಎಂದೂ ಅವರು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರ ಜೂನ್ 24ರಂದು ನವದೆಹಲಿಯಲ್ಲಿ ಸರ್ವಪಕ್ಷ ಸಭೆ ಕರೆದಿರುವುದು ಕೂಡ ತುಂಬಾ ವಿಳಂಬ ನಿರ್ಧಾರ. ಮಣಿಪುರಕ್ಕೆ ಭೇಟಿ ನೀಡಲು ಅವಕಾಶ ನೀಡುವಂತೆ ನಾನು ಕೇಂದ್ರಕ್ಕೆ ಮನವಿ ಮಾಡಿದ್ದೇನೆ. ಆದರೆ, ಸರ್ವ ಪಕ್ಷ ಸಭೆಗೆ ಆಹ್ವಾನ ಪತ್ರ ನನಗೆ ನಿನ್ನೆ ಬಂದಿದೆ ಎಂದರು.  

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದ ಹಿಂಸಾಚಾರದ ಕುರಿತು ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಟಿಎಂಸಿ ಭಾಗವಹಿಸಲಿದೆಯೇ ಎನ್ನುವ ಪ್ರಶ್ನೆಗೆ ‘ರಾಜ್ಯಸಭೆಯಲ್ಲಿ ಟಿಎಂಸಿ ನಾಯಕರಾಗಿರುವ ಡೆರೆಕ್ ಒಬ್ರಿಯಾನ್‌ ಪಕ್ಷದ ಪರವಾಗಿ ಸಭೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಮಮತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.