ADVERTISEMENT

ಸೀಟು ಕಳೆದುಕೊಂಡರೂ ಗೆದ್ದ ನಿತೀಶ್‌ ಕುಮಾರ್‌

ಅಭಯ್ ಕುಮಾರ್
Published 11 ನವೆಂಬರ್ 2020, 0:02 IST
Last Updated 11 ನವೆಂಬರ್ 2020, 0:02 IST
ಮುಖ್ಯಮಂತ್ರಿ ನಿತೀಶ್‌ ಕುಮಾರ್‌
ಮುಖ್ಯಮಂತ್ರಿ ನಿತೀಶ್‌ ಕುಮಾರ್‌   

ನವದೆಹಲಿ: ರಾಜ್ಯ ವಿಭಜನೆಗೂ ಪೂರ್ವದಲ್ಲಿರಲಿ, 2000ನೇ ಸಾಲಿನಲ್ಲಿ ಜಾರ್ಖಂಡ್‌ ಪ್ರತ್ಯೇಕ ರಾಜ್ಯವಾದ ಬಳಿಕ ಇರಲಿ, ಸ್ವಾತಂತ್ರ್ಯಾನಂತರ ಈವರೆಗೆ ಬಿಹಾರವು ಯಾವುದೇ ಚುನಾವಣೆಯಲ್ಲಿ ಇಷ್ಟೊಂದು ತುರುಸಿನ ಸ್ಪರ್ಧೆಯನ್ನು ಕಂಡಿಲ್ಲ. ಅಷ್ಟೇ ಅಲ್ಲ ನಿತೀಶ್‌ ಕುಮಾರ್‌ ಅವರೂ ಎಂದೂ ಇಷ್ಟೊಂದು ದುರ್ಬಲರಾಗಿ ಕಂಡಿರಲಿಲ್ಲ. ಮರಳಿ ಅಧಿಕಾರ ಹಿಡಿಯಲು ಅವರು ಈ ಬಾರಿ ಇನ್ನಿಲ್ಲದಂತೆ ಹೆಣಗಾಡಿದ್ದಾರೆ.

ಕೋವಿಡ್‌ ನಂತರ ದೇಶದಲ್ಲಿ ನಡೆದ ಈ ಮೊದಲ ವಿಧಾನಸಭಾ ಚುನಾವಣೆಯು ಮೂರು ಪ್ರಮುಖ ಕಾರಣಗಳಿಗಾಗಿ ಐತಿಹಾಸಿಕ ಎನಿಸುತ್ತದೆ.

ಮೊದಲನೆಯ ಅಂಶ; 2005ರ ನಂತರ ಇದೇ ಮೊದಲಬಾರಿಗೆ ಬಿಜೆಪಿ ರಾಜ್ಯದಲ್ಲಿ ಜೆಡಿಯುಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆದಿದೆ.

ADVERTISEMENT

ಎರಡನೆಯದು; 2010ರಲ್ಲಿ ನಾಲ್ಕನೇ ಐದರಷ್ಟು, 2015ರಲ್ಲಿ ಮೂರನೇ ನಾಲ್ಕರಷ್ಟು ಬಹುಮತ ಪಡೆದಿದ್ದ ನಿತೀಶ್‌ ಅವರು 2020ರಲ್ಲಿ ಅತಿ ಸಣ್ಣ ಬಹುಮತವನ್ನು ಪಡೆಯಲು ಮಾತ್ರ ಸಾಧ್ಯವಾಗಿದೆ.

ಮೂರನೇ ಅಂಶವೆಂದರೆ; ಲಾಲು ಪ್ರಸಾದ್‌ ಅನುಪಸ್ಥಿತಿಯಲ್ಲಿ ನಡೆದ ವಿಧಾನಸಭಾ ಚುನಾವಣೆ ಇದು. ಅವರ ಪುತ್ರ ತೇಜಸ್ವಿ ಯಾದವ್‌, ನಿತೀಶ್‌ ಹಾಗೂ ಮೋದಿ ಅವರ ಸಂಯುಕ್ತ ಶಕ್ತಿಯನ್ನು ಒಬ್ಬರೇ ಎದುರಿಸಿದರು. ಅಷ್ಟೇ ಅಲ್ಲ ಗೆಲುವಿಗಾಗಿ ಇವರಿಬ್ಬರೂ ಹಗಲಿರುಳು ಶ್ರಮಿಸಬೇಕಾದ ಅನಿವಾರ್ಯವನ್ನು ಸೃಷ್ಟಿಸಿದರು.

ಎರಡು ತಿಂಗಳ ಹಿಂದಿನವರೆಗೂ ಬಿಹಾರದಲ್ಲಿ ಎನ್‌ಡಿಎ ಸುಲಭವಾಗಿ ಗೆಲ್ಲುತ್ತದೆ ಎಂಬ ವಾತಾವರಣವಿತ್ತು. ಆದರೆ ತೇಜಸ್ವಿ ಅವರು ರಾಜಕೀಯವಾಗಿ ಔಚಿತ್ಯ ಕಳೆದುಕೊಂಡಿದ್ದ ಜೀತನ್‌ರಾಮ್‌ ಮಾಂಝಿ, ಉಪೇಂದ್ರ ಕುಶ್ವಾಹ ಹಾಗೂ ಮುಕೇಶ್‌ ಸಾಹ್ನಿ ಅವರನ್ನು ಘಟಬಂಧನದಿಂದ ಹೊರಗಿಟ್ಟರು. ಕಾಂಗ್ರೆಸ್‌ ಮೇಲಿನ ಅವಲಂಬನೆಯನ್ನು ಸ್ವಲ್ಪ ಕಡಿಮೆಮಾಡಿ, ಮೂರು ಎಡ ಪಕ್ಷಗಳತ್ತ ಹಸ್ತ ಚಾಚಿ ಹೊಸ ಮೈತ್ರಿಯನ್ನು ಬೆಸೆದರು. ಈ ತಂತ್ರವು ಘಟಬಂಧನವನ್ನು ಗೆಲುವಿನ ಅತ್ಯಂತ ಸನಿಹದವರೆಗೆ ಕರೆದೊಯ್ದಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಜೆಡಿಯು ಜತೆಗೆ ವಿಐಪಿ ಹಾಗೂ ಎಚ್‌ಎಎಂ ಪಕ್ಷಗಳೂ ಇವೆ ಎಂಬುದನ್ನು ಗಣನೆಗೆ ತೆಗೆದುಕೊಂಡರೆ ಘಟಬಂಧನದ ಸಾಧನೆ ಸಣ್ಣದೇನೂ ಅಲ್ಲ ಎಂಬುದು ಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.