ADVERTISEMENT

ಮನುಷ್ಯನ ಮೇಲೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ: ನಾಳೆಯಿಂದ ಭುವನೇಶ್ವರದಲ್ಲಿ ಆರಂಭ

ಏಜೆನ್ಸೀಸ್
Published 21 ಜುಲೈ 2020, 3:46 IST
Last Updated 21 ಜುಲೈ 2020, 3:46 IST
ಕೊವ್ಯಾಕ್ಸಿನ್‌ ಲಸಿಕೆ
ಕೊವ್ಯಾಕ್ಸಿನ್‌ ಲಸಿಕೆ   

ಭುವನೇಶ್ವರ: ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಕೊರೊನಾ ವೈರಸ್‌ ಲಸಿಕೆಯ ಮನುಷ್ಯನ ಮೇಲಿನ ಪ್ರಯೋಗ ನಾಳೆಯಿಂದ (ಜುಲೈ 22) ಶುರುವಾಗಲಿದೆ. ಮನುಷ್ಯನ ಮೇಲಿನ ಕ್ಲಿನಿಕಲ್‌ ಟ್ರಯಲ್‌ ನಡೆಸಲು ಐಸಿಎಂಆರ್‌ ಆಯ್ಕೆ ಮಾಡಿರುವ 12 ಕೇಂದ್ರಗಳ ಪೈಕಿ ಭುವನೇಶ್ವರದ ಸಂಸ್ಥೆಯೂ ಒಂದು.

ಬಿಬಿವಿ152 ಕೋವಿಡ್‌ ಲಸಿಕೆ ಅಥವಾ ಕೊವ್ಯಾಕ್ಸಿನ್‌ ಮನುಷ್ಯನ ಮೇಲಿನ ಒಂದು ಮತ್ತು ಎರಡು ಹಂತದ ಕ್ಲಿನಿಕಲ್‌ ಟ್ರಯರ್‌ ಬುಧವಾರದಿಂದ ಆರಂಭವಾಗಲಿದೆ. ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಎಸ್‌ಯುಎಂ ಹಾಸ್ಪಿಟಲ್‌ನಲ್ಲಿ ಭಾರತದ ಪ್ರಧಾನ ಔಷಧ ನಿಯಂತ್ರಕರ (ಡಿಸಿಜಿಐ) ನಿಯಮಾವಳಿಗಳ ಪ್ರಕಾರ ವಿಶೇಷ ಪ್ರಯೋಗಾಲಯ ಸಿದ್ಧಪಡಿಸಲಾಗಿದೆ.

'ಮನುಷ್ಯನ ಮೇಲೆ ಕ್ಲಿನಿಕಲ್‌ ಟ್ರಯಲ್‌ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬುಧವಾರದಿಂದ ಪ್ರಕ್ರಿಯೆ ಆರಂಭಿಸಲು ನಿರೀಕ್ಷಿಸಲಾಗಿದೆ' ಎಂದು ಆಸ್ಪತ್ರೆಯ ಕಮ್ಯುನಿಟಿ ಮೆಡಿಸಿನ್‌ ಕೇಂದ್ರದ ಪ್ರೊಫೆಸರ್‌ ಡಾ.ಇ.ವೆಂಕಟ ರಾವ್‌ ಹೇಳಿದ್ದಾರೆ.

ADVERTISEMENT

ಕ್ರಿನಿಕಲ್‌ ಟ್ರಯಲ್‌ನಲ್ಲಿ ಭಾಗಿಯಾಗಲು:

* 18 ವರ್ಷದಿಂದ 55 ವರ್ಷದ ವರೆ‌ಗಿನ ಆರೋಗ್ಯವಂತ ವ್ಯಕ್ತಿಗಳು ಕ್ಲಿನಿಕಲ್‌ ಟ್ರಯಲ್‌ಗೆ ಒಳಗಾಗಗಬಹುದು. ಕೋವಿಡ್–19 ಅಥವಾ ಇನ್ನಾವುದೇ ಕಾಯಿಲೆ ಇರಬಾರದು.

* ಭಾಗಿಯಾಗಲು ಇಚ್ಛಿಸುವ ವ್ಯಕ್ತಿಗಳ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ವ್ಯಕ್ತಿಯ ಆಯ್ಕೆ ಮಾಡಲಾಗುತ್ತದೆ.

* ಮೊದಲ ಹಂತದ ಕ್ಲಿನಿಕಲ್‌ ಟ್ರಯಲ್‌ಗೆ 30–40 ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

* ಲಸಿಕೆ ನೀಡುವ ವ್ಯಕ್ತಿಯನ್ನು ಕನಿಷ್ಠ 2 ಗಂಟೆಗಳ ವರೆಗೂ ಕೇಂದ್ರದಲ್ಲಿಯೇ ಉಳಿಸಿಕೊಂಡು ಗಮನಿಸಲಾಗುತ್ತದೆ. ಯಾವುದೇ ಅಡ್ಡ ಪರಿಣಾಮಗಳು ಹಾಗೂ ತೊಂದರೆ ಉಂಟಾಗುವ ಸಾಧ್ಯತೆಯ ಬಗ್ಗೆ ತಿಳಿದುಕೊಳ್ಳಲಾಗುತ್ತದೆ.

* ಒಬ್ಬ ವ್ಯಕ್ತಿಗೆ 14 ದಿನಗಳ ಅಂತರದಲ್ಲಿ ಎರಡು ಬಾರಿ ಲಸಿಕೆ ನೀಡಲಾಗುತ್ತದೆ.

* ಲಸಿಕೆ ತೆಗೆದುಕೊಂಡ ನಂತರ ವ್ಯಕ್ತಿಯ ರಕ್ತದಲ್ಲಿ ಆ್ಯಂಟಿಬಾಡಿ ಉತ್ತಮ ಮಟ್ಟದಲ್ಲಿದ್ದರೆ, ಅನಂತರ ಎರಡು ಮತ್ತು ಮೂರನೇ ಹಂತಗಳ ಕ್ಲಿನಿಕಲ್ ಟ್ರಯಲ್‌ಗೆ ಪರಿಗಣಿಸಲಾಗುತ್ತದೆ.

* ಪ್ರಯೋಗಕ್ಕೆ ಒಳಗಾಗಲು ಬಯಸುವವರು http://ptctu.soa.ac.in/ ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಅಥವಾ ವಾಟ್ಸ್‌ಆ್ಯಪ್‌ ಮೂಲಕ 89172 11214 ಸಂಖ್ಯೆಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.