ADVERTISEMENT

ಶ್ರೀನಗರದಲ್ಲಿ ಪ್ರತಿಭಟನೆ, ಘರ್ಷಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:15 IST
Last Updated 16 ಆಗಸ್ಟ್ 2019, 20:15 IST
ಪ್ರತಿಭಟನೆಯಲ್ಲಿ ಮಹಿಳೆಯರೂ ಭಾಗಿಯಾಗಿದ್ದರು –ಎಎಫ್‌ಪಿ ಚಿತ್ರ
ಪ್ರತಿಭಟನೆಯಲ್ಲಿ ಮಹಿಳೆಯರೂ ಭಾಗಿಯಾಗಿದ್ದರು –ಎಎಫ್‌ಪಿ ಚಿತ್ರ   

ಶ್ರೀನಗರ : ಸಂವಿಧಾನದ 370ನೇ ವಿಧಿಯನ್ನು ಅಸಿಂಧುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಶ್ರೀನಗರದಲ್ಲಿ ಶುಕ್ರವಾರ ಭಾರಿ ಪ್ರತಿಭಟನೆ ನಡೆದಿದೆ. ಈ ವೇಳೆ ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಸಂಘರ್ಷ ನಡೆದಿದೆ.

ಶುಕ್ರವಾರದ ಪ್ರಾರ್ಥನೆಯ ನಂತರಶ್ರೀನಗರದ ಸೌರಾ ಪ್ರದೇಶದಲ್ಲಿ ಈ ಪ್ರತಿಭಟನೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಜನರುಪ್ರತಿಭಟನೆ ನಡೆಸಿದರು. ಮಹಿಳೆಯರು ಮತ್ತು ಮಕ್ಕಳೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂದು ಎಎಫ್‌ಪಿ ವರದಿ ಮಾಡಿದೆ.

ಹಿಂದಿನ ವಾರವೂ (ಆಗಸ್ಟ್ 9ರಂದು) ಇದೇ ಪ್ರದೇಶದಲ್ಲಿ ಪ್ರತಿಭಟನೆ ಮತ್ತು ಭದ್ರತಾ ಸಿಬ್ಬಂದಿ ಜತೆ ಸಂಘರ್ಷ ನಡೆದಿತ್ತು ಎಂದು ಹಲವು ಮಾಧ್ಯಮ ಸಂಸ್ಥೆಗಳು ವರದಿ ಮಾಡಿದ್ದವು.

ADVERTISEMENT

ಪ್ರತಿಭಟನಕಾರರು ಸೌರಾ ಪ್ರದೇಶದಿಂದ ಶ್ರೀನಗರದ ಕೇಂದ್ರ ಭಾಗದತ್ತ ಮೆರವಣಿಗೆ ನಡೆಸಲು ಮುಂದಾದರು. ಆಗ ಅವರನ್ನುಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಷೆಲ್ ಸಿಡಿಸಿದರು. ಪೆಲೆಟ್‌ ಗುಂಡುಗಳನ್ನು ಹಾರಿಸಿದರು. ಆದರೆ ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ಸಿದ್ಧವಾಗಿ ಬಂದಿದ್ದರು.ಜನರು ದೊಡ್ಡ ತಪ್ಪಲೆ, ಎಣ್ಣೆಯ ಕ್ಯಾನ್, ತಗಡುಗಳನ್ನು ಗುರಾಣಿಯಂತೆ ಬಳಸಿಕೊಂಡರು ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ನಗರದ ಮಧ್ಯಭಾಗಕ್ಕೆ ನುಗ್ಗಲು ನಾವು ಯತ್ನಿಸಿದೆವು. ಆದರೆ ಬಲಪ್ರಯೋಗದಿಂದ ನಮ್ಮನ್ನು ತಡೆಯಲಾಯಿತು’ ಎಂದು ಪ್ರತಿಭಟನಕಾರರೊಬ್ಬರು ಹೇಳಿದ್ದಾರೆ.

‘ನಾವು ಅವರ ಮುಂದೆ ಬೇಡುತ್ತಿಲ್ಲ, ನಮ್ಮದೇನಿತ್ತೋ ಅದನ್ನು ನಾವು ಕೇಳುತ್ತಿದ್ದೇವೆ ಅಷ್ಟೆ. ನಮಗೆ ನೀಡಿದ್ದ ಭರವಸೆಯನ್ನು ಭಾರತ ಗೌರವಿಸಬೇಕು. ಭಾರತದಿಂದ ಸಂಪೂರ್ಣ ಸ್ವಾತಂತ್ರ್ಯ ದೊರೆಯುವವರೆಗೂ ನಾವು ಹಿಂದಡಿ ಇಡುವುದಿಲ್ಲ’ ಎಂದು ಮತ್ತೊಬ್ಬ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.