ADVERTISEMENT

ಜಮ್ಮು–ಕಾಶ್ಮೀರ ಹೆದ್ದಾರಿ: ನಾಗರಿಕ ವಾಹನ ಸಂಚಾರ ನಿಷೇಧ, ವಾರದಲ್ಲಿ 2 ದಿನ ಹೀಗೆ!

ಭದ್ರತಾಪಡೆ ವಾಹನಗಳಿಗೆ ಮಾತ್ರ ಅವಕಾಶ

ಏಜೆನ್ಸೀಸ್
Published 7 ಏಪ್ರಿಲ್ 2019, 7:13 IST
Last Updated 7 ಏಪ್ರಿಲ್ 2019, 7:13 IST
ಜಮ್ಮು–ಕಾಶ್ಮೀರ ಹೆದ್ದಾರಿಯ ಎರಡೂ ಬದಿಯಲ್ಲಿ ನಿಂತಿರುವ ವಾಹನಗಳು– ಸಾಂದರ್ಭಿಕ ಚಿತ್ರ
ಜಮ್ಮು–ಕಾಶ್ಮೀರ ಹೆದ್ದಾರಿಯ ಎರಡೂ ಬದಿಯಲ್ಲಿ ನಿಂತಿರುವ ವಾಹನಗಳು– ಸಾಂದರ್ಭಿಕ ಚಿತ್ರ   

ಶ್ರೀನಗರ:ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯಲ್ಲಿ ವಾರಕ್ಕೆ ಎರಡು ದಿನ ನಾಗರಿಕರ ವಾಹನ ಸಂಚಾರ ನಿಷೇಧಿಸಲಾಗಿದ್ದು, ಈ ಕ್ರಮ ಭಾನುವಾರದಿಂದ ಜಾರಿಗೆ ಬಂದಿದೆ. ಹೆದ್ದಾರಿಯಲ್ಲಿ ನಾಗರಿಕ ವಾಹನಸಂಚಾರ ನಿಷೇಧ ಜಾರಿಗಾಗಿ ಬಾರಾಮುಲ್ಲಾದಿಂದ ಉಧಮ್‌ಪುರವರೆಗಿನ 270 ಕಿ.ಮೀ. ದೂರದ ಹೆದ್ದಾರಿಯಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.

ಜಮ್ಮು–ಕಾಶ್ಮೀರ ಹೆದ್ದಾರಿಯಲ್ಲಿ ಭದ್ರತಾ ಪಡೆ ಸಿಬ್ಬಂದಿ ನಿಯೋಜನೆ–ಸಾಂದರ್ಭಿಕ ಚಿತ್ರ

ಭದ್ರತಾ ಪಡೆಗಳ ವಾಹನ ಸಂಚಾರಕ್ಕಾಗಿ ವಾರದಲ್ಲಿ ಎರಡು ದಿನ ಈ ಕ್ರಮಕೈಗೊಳ್ಳಲಾಗಿದೆ. ಭಾನುವಾರ ಮತ್ತು ಬುಧವಾರ ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯಲ್ಲಿ ಭದ್ರತಾ ಪಡೆ ವಾಹನಗಳು ಮಾತ್ರ ಸಂಚರಿಸಲಿವೆ.

ಫೆ.14ರಂದು ಪುಲ್ವಾಮಾ ಹೆದ್ದಾರಿಯಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿ ಸಾಗುತ್ತಿದ್ದ ವಾಹನಗಳ ಮೇಲೆ ಉಗ್ರ ಸಂಘಟನೆ ಆತ್ಮಾಹುತಿ ಬಾಂಬ್‌ ದಾಳಿ ನಡೆಸಿತ್ತು. ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್‌ ಯೋಧರು ಹುತ್ಮಾತ್ಮರಾದರು. ಇಂಥ ಘಟನೆ ಮರುಕಳಿಸದಂತೆ ಹಾಗೂ ಭದ್ರತಾ ಪಡೆಗಳ ಮೇಲೆ ಯಾವುದೇ ದಾಳಿ ತಡೆಯಲು ಸಹಕಾರಿಯಾಗುವಂತೆ ನಾಗರಿಕ ವಾಹನಗಳ ಸಂಚಾರ ನಿಷೇಧ ಕ್ರಮ ಜರುಗಿಸಲಾಗಿದೆ.

ADVERTISEMENT

ತುರ್ತು ಸಂದರ್ಭಗಳಲ್ಲಿ ಹೆದ್ದಾರಿಯಲ್ಲಿ ನಾಗರಿಕ ವಾಹನಗಳ ಸಂಚಾರಕ್ಕೆ ಅನುಮತಿ ಕಲ್ಪಿಸಲು ವಿಶೇಷ ಸಂಚಾರ ಪಾಸ್‌ಗಳನ್ನು ಪಡೆಯಬೇಕಾಗುತ್ತದೆ. ತುರ್ತು ಸಂದರ್ಭ ಪರಿಶೀಲಿಸಿ ಪಾಸ್‌ ವಿತರಿಸುವ ಸೇವೆಗಳಿಗಾಗಿ ಡ್ಯೂಟಿ ಮ್ಯಾಜಿಸ್ಟ್ರೇಟ್‌ಗಳನ್ನು ಹೆದ್ದಾರಿಯ ಹಲವು ಕಡೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾನುವಾರ ಬೆಳಗಿನಿಂದಲೇ ಹೆದ್ದಾರಿಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿವೆ. ಸಂಚಾರಕ್ಕೆ ಅನುಮತಿ ಕಲ್ಪಿಸಲು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯ ಬಳಿ ಜನರು ಮೊರೆಯಿಡುತ್ತಿರುವುದು ಸಾಮಾನ್ಯವಾಗಿದೆ. ಆದರೆ, ಯಾವುದೇ ನಾಗರಿಕ ವಾಹನಗಳಿಗೆ ಹೆದ್ದಾರಿಯಲ್ಲಿ ಸಂಚಾರಿಸಲು ಅವಕಾಶವಿಲ್ಲ. ಈ ಕುರಿತು ಎನ್‌ಡಿಟಿವಿ ವರದಿ ಮಾಡಿದೆ.

ಅನಂತನಾಗ್‌ ಜಿಲ್ಲೆಯಲ್ಲಿ ವರನೊಬ್ಬ ಮದುವೆ ನಡೆಯುವ ಸ್ಥಳಕ್ಕೆಹೆದ್ದಾರಿ ಮೂಲಕಸಂಚರಿಸಲು ಜಿಲ್ಲಾಧಿಕಾರಿಯಿಂದ ಸಂಚಾರ ಪಾಸ್‌ ಪಡೆದಿದ್ದಾನೆ. ಮದುವೆ ಸಂಭ್ರಮದಲ್ಲಿ ಭಾಗಿಯಾಗಲು ನಾಲ್ಕು ವಾಹನಗಳಲ್ಲಿ 12 ಮಂದಿ ತೆರಳಲು ಅನುಮತಿ ನೀಡಲಾಗಿದೆ.

ಹೆದ್ದಾರಿ ಸಂಚಾರ ನಿಷೇಧಿಸಿ ರಾಜ್ಯಾಡಳಿತ ಕೈಗೊಂಡಿರುವ ಕ್ರಮದ ವಿರುದ್ಧ ರಾಜಕೀಯ ಪಕ್ಷಗಳು ಹಾಗೂ ಹಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಭದ್ರತಾ ದೃಷ್ಟಿಯಿಂದಾಗಿ ನಾಗರಿಕ ವಾಹನಗಳ ಸಂಚಾರವನ್ನು ಈ ಹಿಂದೆ ಯಾವತ್ತಿಗೂ ನಿಷೇಧಿಸಿರಲಿಲ್ಲ, ಪರ್ಯಾಯ ಮಾರ್ಗಗಳನ್ನು ಹುಡುಕುವ ಬದಲು ಕಠಿಣ ಕ್ರಮ ಅನುಸರಿಸಲಾಗುತ್ತಿದೆ ಎಂದಿವೆ.

ಮದುವೆ ಸಮಾರಂಭಕ್ಕೆ ತೆರಳು ಹೆದ್ದಾರಿ ಬಳಕೆಗೆ ಅನುಮತಿ ಪಡೆಯಬೇಕಾಗಿದೆ ಎಂದು ಅನುಮತಿ ಪತ್ರವೊಂದನ್ನು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಟ್ವೀಟಿಸಿದ್ದಾರೆ.

ಹೆದ್ದಾರಿ ನಿಷೇಧ ಕ್ರಮವನ್ನು ಅವರು, ಕಿಂಚಿತ್‌ ಯೋಚನೆಯೂ ಇಲ್ಲದೆ ತೆಗೆದುಕೊಂಡಿರುವ ಕ್ರಮ ಎಂದು ಟೀಕಿಸಿದ್ದಾರೆ.

ಒಂದು ಸೂಕ್ಷ್ಮ‍‍ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ದೊಡ್ಡ ಗುಂಪಿನಲ್ಲಿ ಭದ್ರತಾ ಸಿಬ್ಬಂದಿ ಸಂಚರಿಸುತ್ತಾರೆ. ದಾಳಿಯ ಸಾಧ್ಯತೆಗಳು ಹಾಗೂ ಅಪಾಯವನ್ನು ತಪ್ಪಿಸಲು ಹೆದ್ದಾರಿಯನ್ನು ಭದ್ರತಾ ಸಿಬ್ಬಂದಿ ವಾಹನಗಳ ಸಂಚಾರಕ್ಕಾಗಿ ಮುಕ್ತಗೊಳಿಸಲಾಗುತ್ತದೆ.

ಫೆ.14ರಂದು ಪುಲ್ವಾಮಾದಲ್ಲಿ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆ ಸದಸ್ಯ, ಸ್ಫೋಟಕ ತುಂಬಿದ್ದ ಮಿನಿವ್ಯಾನ್‌ ಮೂಲಕ ಆತ್ಮಾಹುತಿ ದಾಳಿ ನಡೆಸಿದ ಸಮಯದಲ್ಲಿ ಸಿಆರ್‌ಪಿಎಫ್‌ನ 78 ವಾಹನಗಳು ಸಂಚರಿಸುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.