ADVERTISEMENT

ಹಣಕಾಸು ವಿಚಾರದಲ್ಲಿ ಪತಿ ತೋರುವ ಪ್ರಾಬಲ್ಯ ಕ್ರೌರ್ಯವಲ್ಲ: ಸುಪ್ರೀಂ ಕೋರ್ಟ್‌

ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ಕ್ರಿಮಿನಲ್ ದಾವೆ ಅಸ್ತ್ರವಾಗದು

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 15:55 IST
Last Updated 2 ಜನವರಿ 2026, 15:55 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ಪಿಟಿಐ ಚಿತ್ರ

ನವದೆಹಲಿ(ಪಿಟಿಐ): ಹಣಕಾಸು ವಿಚಾರಕ್ಕೆ ಸಂಬಂಧಿಸಿ ಪತಿಯೊಬ್ಬ ತನ್ನ ಪರಿತ್ಯಕ್ತ ಪತ್ನಿ ಮೇಲೆ ಅಧಿಕಾರ ಚಲಾಯಿಸಿದರೆ ಅಥವಾ ಪ್ರಾಬಲ್ಯ ಪ್ರದರ್ಶಿಸಿದರೆ ಅದನ್ನು ಕ್ರೌರ್ಯ ಎಂಬುದಾಗಿ ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ADVERTISEMENT

‘ಒಡಕು ಮೂಡಿರುವ ವೈವಾಹಿಕ ಸಂಬಂಧಗಳಲ್ಲಿ, ಕ್ರಿಮಿನಲ್ ಮೊಕದ್ದಮೆ ಎಂಬುದು ಪ್ರತೀಕಾರ ತೀರಿಸಿಕೊಳ್ಳಲು ಹಾಗೂ ವೈಯಕ್ತಿಕ ದ್ವೇಷ ಸಾಧಿಸಲು ಅಸ್ತ್ರವಾಗಬಾರದು’ ಎಂದೂ ಹೇಳಿದೆ.

ಪರಿತ್ಯಕ್ತ ಪತಿ ವಿರುದ್ಧ ಪತ್ನಿ ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣವನ್ನು ವಜಾಗೊಳಿಸಿ ತೀರ್ಪು ನೀಡಿದ ವೇಳೆ ಸುಪ್ರೀಂ ಕೋರ್ಟ್‌ ಈ ಮಾತು ಹೇಳಿದೆ.

‘ಪತಿ ತನಗೆ ಚಿತ್ರಹಿಂಸೆ ಹಾಗೂ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ’ ಎಂದು ಆರೋಪಿಸಿ ಮಹಿಳೆ ಪ್ರಕರಣ ದಾಖಲಿಸಿದ್ದರು.

ಈ ಕುರಿತ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಆರ್.ಮಹದೇವನ್‌ ಅವರು ಇದ್ದ ನ್ಯಾಯಪೀಠವು ಪತಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದತಿಗೆ ನಿರಾಕರಿಸಿ ತೆಲಂಗಾಣ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಕೂಡ ರದ್ದುಪಡಿಸಿದೆ.

‘ಪ್ರತಿವಾದಿ ಆರೋಪಿಸಿರುವಂತೆ, ಮೇಲ್ಮನವಿದಾರ(ಪತಿ) ಹಣಕಾಸು ವಿಚಾರದಲ್ಲಿ ತೋರಿದ್ದಾನೆ ಎನ್ನಲಾದ ಪ್ರಾಬಲ್ಯವನ್ನು ಕ್ರೌರ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಅದರಲ್ಲೂ, ವಾಸ್ತವಿಕವಾದ ಮಾನಸಿಕ ಅಥವಾ ದೈಹಿಕ ಹಿಂಸೆ ಇರದಿದ್ದಾಗ ಇಂತಹ ನಡೆಯನ್ನು ಕ್ರೌರ್ಯ ಎನ್ನಲಾಗದು’ ಎಂದು ನ್ಯಾಯಪೀಠ ಹೇಳಿದೆ.

‘ಈ ಪ್ರಕರಣವು ಭಾರತೀಯ ಸಮಾಜದ ಪ್ರತಿಬಿಂಬವಾಗಿದೆ. ಮನೆಯಲ್ಲಿ ಮಹಿಳೆಯ ಹಣಕಾಸು ಅಗತ್ಯಗಳನ್ನು ಪುರುಷರೇ ನೋಡಿಕೊಳ್ಳುವುದು ನಮ್ಮ ಸಮಾಜದಲ್ಲಿ ಸಾಮಾನ್ಯ. ಆದರೆ, ಇಂತಹ ವಿಚಾರಗಳಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡುವುದನ್ನು ಪ್ರತೀಕಾರದ ಅಸ್ತ್ರವನ್ನಾಗಿ ಮಾಡಿಕೊಳ್ಳಬಾರದು’ ಎಂದು ಅಭಿಪ್ರಾಯಪಟ್ಟಿದೆ.

ಪರಿತ್ಯಕ್ತ ಪತಿಯು ತಾನು ಕಳುಹಿಸಿದ ಹಣವನ್ನು ಖರ್ಚು ಮಾಡಿದ್ದರ ಕುರಿತು ಪರಿತ್ಯಕ್ತ ಪತ್ನಿಯಿಂದ ವಿವರ ಕೇಳುವುದು ಕ್ರೌರ್ಯ ಎನಿಸುವುದಿಲ್ಲ.
- ನ್ಯಾಯಮೂರ್ತಿ ನಾಗರತ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.