ADVERTISEMENT

ಹೈದರಾಬಾದಿನಲ್ಲಿ ಸಿಕ್ಕಿದ್ದ ₹ 8 ಕೋಟಿ ಬಿಜೆಪಿಗೆ ಸೇರಿದ್ದು: ಐಟಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 6:04 IST
Last Updated 12 ಏಪ್ರಿಲ್ 2019, 6:04 IST
   

ನವದೆಹಲಿ: ಹೈದರಾಬಾದಿನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ₹ 8 ಕೋಟಿ ನಗದು ಬಿಜೆಪಿಗೆ ಸೇರಿದ್ದು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಲೋಕಸಭಾ ಚುನಾವಣೆಗೆ ನಿನ್ನೆ ಮೊದಲ ಹಂತದ ಮತದಾನ ನಡೆದಿತ್ತು. ಮತದಾನ ಇನ್ನು ಎರಡು ದಿನ ಇರುವ ಮೊದಲೇ ಹೈದರಾಬಾದ್‌ ಪೊಲೀಸರು ಕಾರ್ಯಾಚರಣೆವೊಂದರಲ್ಲಿ ₹ 8 ಕೋಟಿ ನಗದನ್ನು ವಶಪಡಿಸಿಕೊಂಡು 7 ಜನರನ್ನು ಬಂಧಿಸಿದ್ದರು.

ಈ ಪ್ರಕರಣ ಕುರಿತಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದು ಈ ಮೊತ್ತ ಬಿಜೆಪಿಗೆ ಸೇರಿದ್ದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹಣ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಮತ್ತು ಅವರ ಐವರು ಸಹಾಯಕರನ್ನು ವಿಚಾರಣೆಗೆ ಒಳಪಡಿಸಿದಾಗ ಅವರುಇದು ಬಿಜೆಪಿಯ ಹಣ ಎಂದು ಒಪ್ಪಿಕೊಂಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ಶ್ರೀನಿವಾಸ ರಾವ್‌ ತಿಳಿಸಿದ್ದಾರೆ.

ADVERTISEMENT

ಅಲ್ಲದೇ,ಬಿಜೆಪಿ ಕಚೇರಿಯ ಲೆಟರ್‌ ಹೆಡ್‌ ಮತ್ತು ಬ್ಯಾಂಕ್‌ ಖಾತೆಯನ್ನು ಪರಿಶೀಲಿಸಿದಾಗ ₹ 8 ಕೋಟಿಯನ್ನುಏಪ್ರಿಲ್‌ 8ರಂದು ಇಂಡಿಯನ್‌ ಬ್ಯಾಂಕ್‌ನಿಂದ (ಚೆಕ್‌ ಸಂಖ್ಯೆ 059198 ) ವಿದ್‌ಡ್ರಾ ಮಾಡಿರುವುದು ಪತ್ತೆಯಾಗಿದೆ ಎಂದುಶ್ರೀನಿವಾಸ ರಾವ್‌ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಹಾಗೂ ಆದಾಯ ತೆರಿಗೆ ಇಲಾಖೆ ಇಷ್ಟು ಮೊತ್ತದ ಹಣಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ಕ್ಲಿನ್‌ ಚೀಟ್‌ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಪೊಲೀಸರು ಕಾನೂನು ತಜ್ಞರ ನೆರವು ಪಡೆದು ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಿದ್ದರು.

ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರಗಳ ಅನ್ವಯ ಮತ್ತು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಇಷ್ಟು ಮೊತ್ತದ ಹಣವನ್ನು ವಿದ್‌ಡ್ರಾ ಮಾಡುವಂತಿಲ್ಲ ಎಂಬುದು ಪೊಲೀಸರ ಆರೋಪವಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಂಧಿಸಿರುವ 7 ಜನರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.