ADVERTISEMENT

ಹೈದರಾಬಾದ್: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರಭಾವಿಗಳ ರಾಜಕಾರಣಿಗಳ ಮಕ್ಕಳು ಎಸಗಿದ ಕೃತ್ಯ: ಶಂಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 15:27 IST
Last Updated 3 ಜೂನ್ 2022, 15:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್: ಇಲ್ಲಿನ ಜುಬಿಲಿ– ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ಶನಿವಾರ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ 17 ವರ್ಷದ ಬಾಲಕಿ ಮೇಲೆ ಐವರು ಬಾಲಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿದೆ.

‘ಈ ಪ್ರಕರಣದಲ್ಲಿರುವ ಆರೋಪಿಗಳು ಎಐಎಂಐಎಂ ಶಾಸಕರ ಪುತ್ರ, ವಕ್ಫ್ ಅಧಿಕಾರಿ ಮತ್ತು ಟಿಆರ್‌ಎಸ್ ಮುಖಂಡರೊಬ್ಬರ ಪುತ್ರರು ಎಂಬ ಶಂಕೆಯಿದೆ. ಹಾಗಾಗಿ, ತೆಲಂಗಾಣ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ’ ಎಂದು ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಆರೋಪಿಸಿವೆ.

ಘಟನೆಯ ವಿವರ: ಶನಿವಾರ ಮಧ್ಯಾಹ್ನ ಜುಬಿಲಿ ಹಿಲ್ಸ್‌ನ ರಸ್ತೆ ಸಂಖ್ಯೆ 36ರಲ್ಲಿನ ಪಬ್‌ಗೆ ಬಾಲಕಿಯು ತನ್ನ ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದಳು. ಅಲ್ಲಿ ಕೆಲ ಹುಡುಗರು ಆಕೆಯೊಂದಿಗೆ ಸ್ನೇಹ ಬೆಳೆಸಿದರು. ಬಳಿಕ ಅವರು ಪಬ್‌ನಿಂದ ಹೊರಬಂದು ಬಂಜಾರಾ ಹಿಲ್ಸ್‌ನ ಬೇಕರಿಯೊಂದರಲ್ಲಿ ಕಾಲ ಕಳೆದು, ಬೆಂಜ್ ಮತ್ತು ಇನೋವಾ ಕಾರಿನಲ್ಲಿ ಏಕಾಂತ ಸ್ಥಳಕ್ಕೆ ತೆರಳಿದರು. ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಾಲಕರು, ಆಕೆಯನ್ನು ಅದೇ ಪಬ್‌ನಲ್ಲಿ ಬಿಟ್ಟು ಹೋಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬಾಲಕಿಯ ತಂದೆಯು ಪಬ್‌ನಿಂದ ಆಕೆಯನ್ನು ಮನೆಗೆ ಕರೆದೊಯ್ದಿದ್ದು, ಪೋಷಕರು ಆಕೆಯ ಕತ್ತಿನ ಸುತ್ತ ಆಗಿದ್ದ ರಕ್ತದ ಗಾಯಗಳ ಕುರಿತು ಪ್ರಶ್ನಿಸಿದ್ದಾರೆ. ಆಗ ಬಾಲಕಿಯು ಕಾರಿನಲ್ಲಿ ಐವರು ಬಾಲಕರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ತಿಳಿಸಿದ್ದಾಳೆ. ಈ ಕುರಿತು ಆಕೆಯ ತಂದೆ ದೂರು ನೀಡಿದ್ದು, ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್ಐಆರ್ ದಾಖಲಾಗಿದೆ. ಪೋಕ್ಸೊ ಕಾಯ್ದೆಯ ಅಡಿಯೂ ದೂರು ದಾಖಲಿಸಿಕೊಳ್ಳಲಾಗಿದೆ.

‘ಬಾಲಕಿಯ ಹೇಳಿಕೆಯನ್ನು ಪಡೆದಿದ್ದು, ಘಟನಾ ಸ್ಥಳದಲ್ಲಿದ್ದ ಸಿಸಿ ಟಿವಿ ದೃಶ್ಯಾವಳಿ ಮತ್ತು ಇತರ ಪುರಾವೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದೇವೆ. ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬಾಕ್ಸ್‌

ವಿಳಂಬ ತಂತ್ರಕ್ಕೆ ಬಿಜೆಪಿ ಆಕ್ರೋಶ

‘ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕಾರನ್ನು ವಶಪಡಿಸಿಕೊಂಡು, ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲಿಸಿದ್ದಾರೆ. ಆದರೆ, ಒಬ್ಬ ಆರೋಪಿಯನ್ನೂ ಬಂಧಿಸಿಲ್ಲ. ಆರೋಪಿಗಳು ಬಾಲಕರೇ ಅಥವಾ ಅಲ್ಲವೇ ಎಂಬುದನ್ನು ಕೋರ್ಟ್ ನಿರ್ಧರಿಸುತ್ತದೆ. ಈ ವಿಳಂಬ ತಂತ್ರ ಏಕೆ?’ ಎಂದು ತೆಲಂಗಾಣದ ಬಿಜೆಪಿಯ ವಕ್ತಾರ ಕೃಷ್ಣಸಾಗರ್ ರಾವ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅಥವಾ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅನುಮತಿಗಾಗಿ ಪೊಲೀಸರು ಕಾಯುತ್ತಿದ್ದಾರೆಯೇ’ ಎಂದೂ ಅವರು ಪ್ರಶ್ನಿಸಿದ್ದಾರೆ.

ಬಾಲಕಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ತೆಲಂಗಾಣ ಬಿಜೆಪಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.