ADVERTISEMENT

ಪೊಲೀಸರು, ಪ್ರಕರಣಗಳಿಂದ ನನ್ನನ್ನು ಬೆದರಿಸಲಾಗದು: ರಾಹುಲ್‌

ಪ್ರಧಾನಿ, ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ತೀವ್ರ ವಾಗ್ದಾಳಿ

ಪಿಟಿಐ
Published 20 ಮಾರ್ಚ್ 2023, 18:27 IST
Last Updated 20 ಮಾರ್ಚ್ 2023, 18:27 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ವಯನಾಡ್ (ಕೇರಳ): ‘ಎಷ್ಟು ಬಾರಿಯಾದರೂ ನನ್ನ ಮೇಲೆ ರಾಜಕೀಯ ದಾಳಿ ಆದರೂ, ನನ್ನ ಮನಗೆ ಎಷ್ಟೇ ಬಾರಿ ಪೊಲೀಸರನ್ನು ಕಳುಹಿಸಿದರೂ ಹೆದರುವವನು ನಾನಲ್ಲ. ಹಲವು ಪ್ರಕರಣಗಳನ್ನು ದಾಖಲಿಸಿರುವುದಕ್ಕೂ ಬೆದರುವುದಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸೋಮವಾರ ಹೇಳಿದ್ದಾರೆ.

ಕೋಯಿಕ್ಕೋಡ್‌ ಜಿಲ್ಲೆಯ ಮುಕ್ಕಂನಲ್ಲಿ ಫಲಾನುಭವಿಗಳಿಗೆ ಹೊಸ ಮನೆಯ ಕೀಲಿಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ‘ನಾನು ಸತ್ಯವನ್ನು ನಂಬುವವನು ಮತ್ತು ಸತ್ಯದ ಪರ ಇರುವವನು. ಹೀಗಾಗಿ ಇದಕ್ಕೆಲ್ಲ ಹೆದರುವುದಿಲ್ಲ’ ಎಂದರು.

ಭಾರತ್ ಜೋಡೊ ಯಾತ್ರೆಯ ಸಂದರ್ಭದಲ್ಲಿ ರಾಹುಲ್‌ ಗಾಂಧಿ ನೀಡಿದ್ದಾರೆ ಎನ್ನಲಾದ, ‘ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ’ ಎಂಬ ಹೇಳಿಕೆಯ ಬಗ್ಗೆ ವಿಚಾರಿಸಲು ದೆಹಲಿ ಪೊಲೀಸರ ತಂಡ ಭಾನುವಾರ ಅವರ ಮನೆಗೆ ಬಂದಿತ್ತು. ಇದರ ಹಿನ್ನೆಲೆಯಲ್ಲಿ ರಾಹುಲ್‌ ಈ ಹೇಳಿಕೆ ನೀಡಿದ್ದಾರೆ.

ADVERTISEMENT

‘ಪ್ರಧಾನಿ, ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಪೊಲೀಸರಿಗೆ ಅನೇಕರು ಹೆದರಬಹುದು. ಆದರೆ ಅವರಿಗೆಲ್ಲ ನಾನು ಕನಿಷ್ಠವೂ ಹೆದರುವುದಿಲ್ಲ. ನಾನೇಕೆ ಅವರಿಗೆ ಹೆದರುತ್ತಿಲ್ಲ ಎಂಬುದೇ ಅವರ ಸಮಸ್ಯೆಯಾಗಿದೆ. ನಾನು ಸತ್ಯವನ್ನು ನಂಬುವುದರಿಂದ ಅವರಿಗೆಲ್ಲ ಭಯ ಪಡುವುದಿಲ್ಲ’ ಎಂದು ಅವರು ಹೇಳಿದರು.

‘ಪ್ರಧಾನಿ, ಆರ್‌ಎಸ್‌ಎಸ್‌ ಮತ್ತು ಬಿಜೆಪಿಯು ಭಾರತದ ಸಂಸ್ಥೆಗಳು ಮತ್ತು ಸಿದ್ಧಾಂತದ ಮೇಲೆ ದಾಳಿ ನಡೆಸುತ್ತಿವೆ ಎಂಬುದೇ ಸತ್ಯ. ಇದನ್ನು ನಾನು ಪದೇ ಪದೇ ಪುನರಾವರ್ತಿಸಿ
ಹೇಳುತ್ತೇನೆ’ ಎಂದು
ಅವರು ತಿಳಿಸಿದರು.

ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಆರ್‌ಎಸ್ಎಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್‌,
‘ಪ್ರಧಾನಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರ ಮನಸ್ಸಿನಲ್ಲಿ ಗೊಂದಲ, ಭ್ರಮೆ ಮತ್ತು ಅಹಂಕಾರವಿದೆ. ಅವರು ತಮ್ಮನ್ನು ತಾವು ಇಡೀ ಭಾರತ ಎಂದು ಭಾವಿಸಿಕೊಂಡಿದ್ದಾರೆ’ ಎಂದು ಟೀಕಿಸಿದರು.

‘ಪ್ರಧಾನಿ ಒಬ್ಬರು ಭಾರತೀಯ ವ್ಯಕ್ತಿಯೇ ಹೊರತು ಅವರೇ ಭಾರತವಲ್ಲ. ಅವರು ಎಷ್ಟೇ ಭ್ರಮೆ ಅಥವಾ ಎಷ್ಟೇ ಅಹಂಕಾರಿ ಆಗಿದ್ದರೂ, ಈ ದೇಶದಲ್ಲೀ ಅವರೂ ಒಬ್ಬ ಭಾರತೀಯ ಮಾತ್ರ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ದೇಶದಲ್ಲಿ 140 ಕೋಟಿ ಜನರಿದ್ದಾರೆ ಎಂಬುದನ್ನೇ ಮರೆತಿದ್ದಾರೆ. ಈ ಜನರೆಲ್ಲರೂ ಬಿಜೆಪಿ, ಆರ್‌ಎಸ್‌ಎಸ್ ಅಥವಾ ಪ್ರಧಾನಿ ಅಲ್ಲ’ ಎಂದು ರಾಹುಲ್‌ ಹೇಳಿದರು.

‘ಹೀಗಾಗಿ ಪ್ರಧಾನಿ, ಬಿಜೆಪಿ, ಆರ್‌ಎಸ್‌ಎಸ್‌ ಮೇಲಿನ ಯಾವುದೇ ದಾಳಿ ಅಥವಾ ಟೀಕೆಯು ಭಾರತ ಅಥವಾ ಅದರ ಜನರ ಮೇಲಿನ ದಾಳಿ ಆಗುವುದಿಲ್ಲ’ ಎಂದು ಅವರು ತಿಳಿಸಿದರು.

‘ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ದಾಳಿಯ ಮೂಲಕ ದೇಶದ ಮೇಲೆ ದಾಳಿ ನಡೆಸುತ್ತಿರುವವರು ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಪ್ರಧಾನಿಯೇ ಆಗಿದ್ದಾರೆ. ಹೀಗೆ ಹೇಳುವುದನ್ನು ನಾನು ನಿಲ್ಲಿಸುವುದಿಲ್ಲ’ ಎಂದು ರಾಹುಲ್‌ ಗಾಂಧಿ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.