ADVERTISEMENT

ಠಾಕ್ರೆ ವಿರುದ್ಧದ ಸಚಿವ ರಾಣೆ ಹೇಳಿಕೆ ಒಪ್ಪಲಾರೆ: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 13:46 IST
Last Updated 24 ಆಗಸ್ಟ್ 2021, 13:46 IST
ಚಂದ್ರಕಾಂತ ಪಾಟೀಲ್‌
ಚಂದ್ರಕಾಂತ ಪಾಟೀಲ್‌   

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರ ವಿರುದ್ಧದ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಹೇಳಿಕೆಯನ್ನು ನಾನು ಒಪ್ಪಲಾರೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌ ಹೇಳಿದ್ದಾರೆ.

ಉದ್ಧವ ಠಾಕ್ರೆ ಅವರ ವಿರುದ್ಧದ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಮಂಗಳವಾರ ಬಂಧಿಸಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐಗೆ ಪ್ರತಿಕ್ರಿಯೆ ನೀಡಿರುವ ಪಾಟೀಲ್‌, ‘ಸಿಎಂ ಉದ್ಧವ ಠಾಕ್ರೆ ಅವರ ವಿರುದ್ಧದ ಸಚಿವ ನಾರಾಯಣ ರಾಣೆ ಅವರ ಹೇಳಿಕೆಯನ್ನು ನಾನು ಬೆಂಬಲಿಸಲಾರೆ. ಆದರೆ, ಅದೇ ಕಾರಣಕ್ಕೆ ಬಂಧಿಸುವುದು, ಬಂಧನ ವಾರೆಂಟ್‌ ಜಾರಿ ಮಾಡಿದ್ದರೆ, ರಾಜ್ಯಪಾಲರ ವಿರುದ್ಧದ ಶಿವಸೇನೆ ನಾಯಕರ ಹೇಳಿಕೆಗಳ ಬಗ್ಗೆ ಏನು ಹೇಳಬೇಕು? ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾದ ರಾಜ್ಯಪಾರ ವಿರುದ್ಧ ಮಹಾರಾಷ್ಟ್ರ ಸರ್ಕಾರದ ಪ್ರತಿನಿಧಿಗಳು ನಿತ್ಯವೂ ಹೇಳಿಕೆಗಳನ್ನು ನೀಡುತ್ತಾರೆ,’ ಎಂದು ಚಂದ್ರಕಾಂತ ಪಾಟೀಲ್‌ ಹೇಳಿದ್ದಾರೆ.

ADVERTISEMENT

ಮುಖ್ಯಮಂತ್ರಿಯವರಿಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವರ್ಷ ತಿಳಿಯದಿರುವುದು ಅವಮಾನಕರ ವಿಷಯ, ನಾನು ಸ್ಥಳದಲ್ಲೇನಾದರೂ ಇದ್ದಿದ್ದರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ’ ಎಂದು ರಾಣೆ ಹೇಳಿದ್ದರು.

ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಧ್ವಜಾರೋಹಣ ನಡೆಸಿ ಭಾಷಣ ಮಾಡುತ್ತಿದ್ದ ವೇಳೆ ಸ್ವಾತಂತ್ರ್ಯ ಲಭಿಸಿದ ವರ್ಷವನ್ನು ಪಕ್ಕದವರಿಂದ ಕೇಳಿ ತಿಳಿದುಕೊಂಡು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.