ಜಾಕೀರ್ ಹುಸೇನ್
ಪಿಟಿಐ ಚಿತ್ರ
ಮುಂಬೈ: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ನಿಧನಕ್ಕೆ ಅವರಿಗೆ ತಬಲಾ ಮಾಡಿಕೊಡುತ್ತಿದ್ದ ಮಹಾರಾಷ್ಟ್ರದ ಹರಿದಾಸ್ ವಟ್ಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನನ್ನ ತಬಲಾ ತಯಾರಿಕೆ ಇನ್ನುಮುಂದೆ ಹಿಂದಿನಂತೆ ಇರುವುದಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
‘ನಾನು ಮೊದಲು ಅವರ ತಂದೆ ಅಲ್ಲಾ ರಾಖಾ ಅವರಿಗೆ ತಬಲಾ ತಯಾರಿಸಲು ಆರಂಭಿಸಿದೆ. 1998ರಿಂದ ಜಾಕೀರ್ ಹುಸೇನ್ ಸಾಬ್‌ಗಾಗಿ ತಬಲಾಗಳನ್ನು ತಯಾರಿಸಿದೆ’ಎಂದು ಭಾವುಕರಾದ 59 ವರ್ಷದ ವಟ್ಕರ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಮುಂಬೈನ ಕಂಜುರ್ಮಾರ್ಗ್‌ನಲ್ಲಿ ತಮ್ಮ ವರ್ಕ್‌ಶಾಪ್‌ನಲ್ಲಿ ಮಾತನಾಡಿದ ವಟ್ಕರ್, ಈ ವರ್ಷದ ಆಗಸ್ಟ್‌ನಲ್ಲಿ ಮುಂಬೈನಲ್ಲಿ ಅವರನ್ನು ಕೊನೆಯ ಬಾರಿ ಭೇಟಿಯಾಗಿದ್ದೆ ಎಂದಿದ್ದಾರೆ.
‘ಅಂದು ಗುರು ಪೂರ್ಣಿಮಾ. ನಾವು ಅವರ ಅನೇಕ ಅಭಿಮಾನಿಗಳ ಸಮ್ಮುಖದಲ್ಲೇ ಸಭಾಂಗಣದಲ್ಲಿ ಭೇಟಿಯಾದೆವು. ಮರುದಿನ, ನಾನು ನೇಪಿಯನ್ ಸೀ ರೋಡ್ ಬಳಿ ಇರುವ ಸಿಮ್ಲಾ ಹೌಸ್ ಕೋಆಪರೇಟಿವ್ ಸೊಸೈಟಿಯಲ್ಲಿರುವ ಅವರ ಮನೆಗೆ ಹೋಗಿದ್ದೆ. ಒಂದೆರಡು ಗಂಟೆಗಳ ಕಾಲ ಅವರ ಜೊತೆ ಮಾತುಕತೆ ನಡೆಸಿದ್ದೆ’ ಎಂದು ವಟ್ಕರ್ ಹೇಳಿದ್ದಾರೆ.
ತಮಗೆ ಎಂತಹ ತಬಲಾ ಬೇಕು ಮತ್ತು ಯಾವಾಗ ಬೇಕೆಂಬ ಬಗ್ಗೆ ಅವರು ಬಹಳ ನಿರ್ದಿಷ್ಟವಾಗಿದ್ದರು. ತಬಲಾವನ್ನು ಟ್ಯೂನ್ ಮಾಡುವುದರ ಮೇಲೆ ಅವರು ಬಹಳ ಗಮನ ಕೇಂದ್ರೀಕರಿಸುತ್ತಿದ್ದರು ಎಂದಿದ್ದಾರೆ.
ಪಶ್ಚಿಮ ಮಹಾರಾಷ್ಟ್ರದ ಮಿರಾಜ್ ಮೂಲದ ವಟ್ಕರ್ ಮೂರನೇ ಪೀಳಿಗೆಯ ತಬಲಾ ತಯಾರಕರಾಗಿದ್ದಾರೆ.
ಜಾಕೀರ್ ಹುಸೇನ್‌ಗಾಗಿ ಎಷ್ಟು ತಬಲಾ ಮಾಡಿಕೊಟ್ಟಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಹಳಷ್ಟು ತಬಲಾ ಮಾಡಿಕೊಟ್ಟಿದ್ದೇನೆ. ಅವರಿಗೆ ತಬಲಾ ಮಾಡಿಕೊಟ್ಟೆ, ಅವರು ನನಗೆ ಜೀವನ ಕೊಟ್ಟರು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.