ADVERTISEMENT

ನನಗೆ ಹಿಂದಿ ಅರ್ಥವಾಗುತ್ತದೆ: 'ವ್ಯಂಗ್ಯ' ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರ

ಪಿಟಿಐ
Published 24 ನವೆಂಬರ್ 2018, 15:43 IST
Last Updated 24 ನವೆಂಬರ್ 2018, 15:43 IST
   

ಭೋಪಾಲ್: ನಿರ್ದಿಷ್ಟ ದಾಳಿ ನಡೆದು ಎರಡು ವರ್ಷ ಕಳೆದರೂ ಎನ್‍ಡಿಎ ಸರ್ಕಾರ ಇನ್ನೂ ಅದರ ಬಗ್ಗೆ ಯಾಕೆ ಟಾಂ ಟಾಂ ಮಾಡುತ್ತಿದೆ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ರಕ್ಷಣಾ ಸಚಿವೆ ನಿರ್ಮಲಾ ಖಡಕ್ ಉತ್ತರನೀಡಿದ್ದಾರೆ.
ಶುಕ್ರವಾರ ಭೋಪಾಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಪತ್ರಕರ್ತರೊಬ್ಬರು 2016ರಲ್ಲಿ ನಡೆದ ನಿರ್ದಿಷ್ಟ ದಾಳಿ ಬಗ್ಗೆ ಎನ್‍ಡಿಎ ಸರ್ಕಾರ ಇನ್ನೂ ಮಾತನಾಡುವುದನ್ನು ನಿಲ್ಲಿಸಿಲ್ಲ ಎಂದು ವ್ಯಂಗ್ಯದ ಪ್ರಶ್ನೆ ಕೇಳಿದ್ದರು.ಇದಕ್ಕೆ ಉತ್ತರಿಸಿದ ಸಚಿವೆ ನಿರ್ಮಲಾ, ನೀವು ಈ ರೀತಿ ವ್ಯಂಗ್ಯವಾಗಿ ಕೇಳಿದ್ದು ನನಗೆ ನೋವುಂಟು ಮಾಡಿದೆ. ನೀವು ಬಿನ್ಬಜಾಯೆ (ಟಾಂ ಟಾಂ ಹೊಡೆಯುವುದು) ಎಂಬ ಪದ ಬಳಸಿದಿರಿ. ನನಗೆ ಹಿಂದಿ ಅರ್ಥವಾಗುತ್ತದೆ ಎಂದಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಸೆಪ್ಟೆಂಬರ್ 2016ರಲ್ಲಿನಿಯಂತ್ರಣಾ ಗಡಿರೇಖೆಯಲ್ಲಿ ಭಾರತೀಯ ಸೇನೆ ಉಗ್ರರ ಮೇಲೆ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ ಪದೇ ಪದೇ ಹೇಳುತ್ತಿರುವುದರಿಂದ ಪತ್ರಕರ್ತರು ಈ ಪ್ರಶ್ನೆಯನ್ನು ಕೇಳಿದ್ದರು.
ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೆ ಇಂಥ ದಾಳಿಯನ್ನೇನು ನಡೆಸಿಲ್ಲವೇ? ಈ ದಾಳಿ ಬಗ್ಗೆ ಪದೇ ಪದೇ ಹೇಳುವಂತದ್ದೇನಿದೆ ಎಂಬುದುಪತ್ರಕರ್ತರ ಪ್ರಶ್ನೆಯಾಗಿತ್ತು.
ಪ್ರತಿಯೊಬ್ಬ ಪ್ರಜೆಯೂ ಇದನ್ನು ವೈಭವೀಕರಿಸಬೇಕು. ಶತ್ರುಗಳ ವಿರುದ್ದ ದಾಳಿ ನಡೆಸುವುದಕ್ಕೆ ನಾವು ಯಾಕೆ ಹಿಂಜರಿಯಬೇಕು?ಉಗ್ರರ ಸಹಾಯದಿಂದ ಅವರು ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದರು. ನಾವು ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿದೆವು ಎಂದು ಸಚಿವೆ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT