ADVERTISEMENT

ಸೇನಾ ಹೆಲಿಕಾಪ್ಟರ್‌ನಿಂದ ಲಘು ಫಿರಂಗಿ ಸಾಗಣೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 20:14 IST
Last Updated 3 ಅಕ್ಟೋಬರ್ 2019, 20:14 IST
 ಎಂಐ–17 IV ಹೆಲಿಕಾಪ್ಟರ್
ಎಂಐ–17 IV ಹೆಲಿಕಾಪ್ಟರ್    

ಗುವಾಹಟಿ: ಚೀನಾದ ಗಡಿಗೆ ಹೊಂದಿಕೊಂಡಿರುವ ಅರುಣಾಚಲ ಪ್ರದೇಶದಲ್ಲಿರುವ ‘ಟುಟಿಂಗ್‌ ಆಧುನಿಕ ಭೂಸ್ಪರ್ಶ ಮೈದಾನ’ದಲ್ಲಿ ಭಾರತೀಯ ಸೇನೆಯ ಎಂಐ–17 IV ಹೆಲಿಕಾಪ್ಟರ್ ಇದೇ ಮೊದಲ ಬಾರಿಗೆ ಲಘು ಫಿರಂಗಿ ಸಾಧನವನ್ನು ಹೊತ್ತೊಯ್ಯುವ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿತು.

ಈ ಕುರಿತು ಮಾಹಿತಿ ನೀಡಿದ ಶಿಲ್ಲಾಂಗ್‌ನಲ್ಲಿರುವ (ಮೇಘಾಲಯ) ಸೇನಾ ಮುಖ್ಯ ಕಚೇರಿಯ ವಕ್ತಾರ ವಿಂಗ್‌ ಕಮಾಂಡರ್‌ ರತ್ನಾಕರ್‌ ಸಿಂಗ್‌ ಅವರು, ‘ ಇಂಥ ಸಂಕೀರ್ಣ ಕಾರ್ಯಾಚರಣೆಗೆ ಇದೇ ಮೊದಲ ಬಾರಿಗೆ ಎಂಐ–17 ಹೆಲಿಕಾಪ್ಟರ್ ಬಳಕೆ ಮಾಡಲಾಗಿತ್ತು’ ಎಂದು ತಿಳಿಸಿದರು.

‘ಯಾವುದೇ ಕಾರ್ಯಾಚರಣೆಯ ತುರ್ತು ಸಂದರ್ಭದಲ್ಲಿ ಫಿರಂಗಿಯನ್ನು ಸೇವೆಗೆ ನಿಯೋಜಿಸಲು ಅಗತ್ಯವಿರುವ ಕಾಲಾವಧಿ ಗಣನೀಯವಾಗಿ ಕುಗ್ಗಿದೆ’ ಎಂದು ಹೇಳಿದರು.

ADVERTISEMENT

ಮೂಲಗಳ ಪ್ರಕಾರ, ಈ ಫಿರಂಗಿಯನ್ನು ಸೇನೆಯು ಈಗ ಗಡಿಗೆ ತೀರಾ ಸಮೀಪದಲ್ಲಿರುವ ತನ್ನ ತಾಣಕ್ಕೆ ಸ್ಥಳಾಂತರಿಸಲಿದೆ.

‘ಟುಟಿಂಗ್‌ ಆಧುನಿಕ ಭೂಸ್ಪರ್ಶ ಮೈದಾನ (ಎಎಲ್‌ಜಿ)’ ಸಯಾಂಗ್ ಜಿಲ್ಲೆಯಲ್ಲಿ ನೆಲಮಟ್ಟದಿಂದ 4,070 ಅಡಿ ಎತ್ತರದಲ್ಲಿದೆ. 1962ರ ಸಿನೊ–ಭಾರತ ಯುದ್ಧದ ತರುವಾಯ ಬಳಕೆ ಮಾಡುತ್ತಿರಲಿಲ್ಲ. ಭಾರತೀಯ ಸೇನೆ 2016ರಲ್ಲಿ ಮತ್ತೆ ಇದನ್ನು ಬಳಸಲು ಆರಂಭಿಸಿತು.

ಇಂಥದೇ ಆರು ಎಎಲ್‌ಜಿಗಳು ಆಲೊ, ಮೆಚುಕಾ, ಪಾಸಿಘಾಟ್, ತವಾಂಗ್, ವಾಲಾಂಗ್, ಝಿರೊದಲ್ಲಿ ಕಾರ್ಯಾರಂಭ ಮಾಡಿವೆ. ಈ ಸೇವೆಯು ಸೇನೆಯ ಕಾರ್ಯಸಾಮರ್ಥ್ಯವನ್ನು ವೃದ್ಧಿಸಲಿದೆ. ಜೊತೆಗೆ, ಅರುಣಾಚಲ ಪ್ರದೇಶದ ಎತ್ತರದ ಪ್ರದೇಶದಲ್ಲಿರುವ ಕುಗ್ರಾಮಗಳಿಗೆ ಸರಕು ಸಾಗಣೆಗೂ ಅನುಕೂಲ.

ಅರುಣಾಚಲ ಪ್ರದೇಶವು ಚೀನಾ ಅಲ್ಲದೆ ಮ್ಯಾನ್ಮಾರ್ ಮತ್ತು ಭೂತಾನ್‌ ಗಡಿಗೂ ಹೊಂದಿಕೊಂಡಿದೆ. ಇಡೀ ಅರುಣಾಚಲ ಪ್ರದೇಶ ತನ್ನ ಟಿಬೆಟ್‌ ಬಲಯದ ಭಾಗ ಎಂದು ಚೀನಾ ಪ್ರತಿಪಾದಿಸುತ್ತಿರುವ ಹಿನ್ನೆಲೆಯಲ್ಲಿ ಗಡಿಯುದ್ದಕ್ಕೂ ರಕ್ಷಣಾ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಭಾರತ ಒತ್ತು ನೀಡುತ್ತಿದೆ. ಗಡಿ ಭಾಗದಿಂದ ಎದುರಾಗುವ ಯಾವುದೇ ಸವಾಲು ಎದುರಿಸಲು ಸನ್ನದ್ಧವಾಗಿದೆ ಎಂದು ಸೇನೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.