ADVERTISEMENT

ರಕ್ಷಣಾ ತಂಡ ರಕ್ಷಣೆಗೆ ಹರಸಾಹಸ

AR-IAF EFFORT

ಪಿಟಿಐ
Published 29 ಜೂನ್ 2019, 18:58 IST
Last Updated 29 ಜೂನ್ 2019, 18:58 IST
ಎಎನ್–32 ವಿಮಾನ ಪತನಗೊಂಡಿದ್ದ ಸ್ಥಳ ಪಿಟಿಐ ಚಿತ್ರ
ಎಎನ್–32 ವಿಮಾನ ಪತನಗೊಂಡಿದ್ದ ಸ್ಥಳ ಪಿಟಿಐ ಚಿತ್ರ   

ಇಟಾನಗರ: ಎಎನ್‌–32 ವಿಮಾನ ಪತನಗೊಂಡ ಅರುಣಾಚಲ ಪ್ರದೇಶದ ಕಡಿದಾದ ಬೆಟ್ಟದಲ್ಲಿ ಸಿಲುಕಿರುವ 12 ಮಂದಿ ರಕ್ಷಣಾ ತಂಡವನ್ನು ರಕ್ಷಿಸಲು ಭಾರತೀಯ ವಾಯುಪಡೆ ಹರಸಾಹಸ ಪಡುವಂತಾಗಿದೆ.

ಸಿಯಾಂಗ್‌ ಮತ್ತು ಶಿ ಯಾಮಿ ಜಿಲ್ಲೆಗಳ ನಡುವಿನ ಪ್ರದೇಶದಲ್ಲಿ ಇಷ್ಟು ಜನ ಕಳೆದ 17 ದಿನಗಳಿಂದ ಸಿಲುಕಿದ್ದಾರೆ. ಇದು 12 ಸಾವಿರ ಅಡಿ ಎತ್ತರದಲ್ಲಿದೆ. ವಿಮಾನದಿಂದ ಇವರನ್ನು ಕೆಳಗಿಳಿಸಿ ಪತನಗೊಂಡ ವಿಮಾನದಲ್ಲಿದ್ದ 13 ಜನರ ಮೃತದೇಹವನ್ನು ಸಾಗಿಸಲಾಗಿತ್ತು.

ಹವಾಮಾನ ಸುಧಾರಿಸುವುದನ್ನೇ ಕಾಯುತ್ತಿದ್ದೇವೆ. ಆನಂತರವಷ್ಟೇ ಅವರನ್ನು ಕರೆತರಲು ಸಾಧ್ಯ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ವಿಮಾನ ಪತನಗೊಂಡ ಸ್ಥಳದಿಂದ ರಕ್ಷಣಾ ತಂಡವನ್ನು ಆದಷ್ಟು ಬೇಗ ಕರೆತರಲಾಗುವುದು. ಆ ಸ್ಥಳಕ್ಕೆ ತೆರಳಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಭಾರಿ ಪ್ರಮಾಣದಲ್ಲಿ ಮೋಡ ಆವರಿಸುತ್ತಿರುವುದರಿಂದ ಹೆಲಿಕಾಪ್ಟರ್‌ಗಳನ್ನು ಇಳಿಸಲು ಅಡ್ಡಿಯಾಗುತ್ತಿದೆ ಎಂದು ವಾಯುಪಡೆಯ ವಿಂಗ್ ಕಮಾಂಡರ್‌ ರತ್ನಾಕರ್‌ ಸಿಂಗ್ ಹೇಳಿದ್ದಾರೆ.

ಪತನಗೊಂಡ ಸ್ಥಳದಲ್ಲಿರುವ ತಂಡಕ್ಕೆ ಆಹಾರ ಪದಾರ್ಥ ಮತ್ತು ಇತರೆ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ. ಅವರೊಂದಿಗೆ ಸೆಟಲೈಟ್‌ ಫೋನ್‌ ಮೂಲಕ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಬೆಟ್ಟಕ್ಕೆ ಚಾರಣ ಮಾಡಿ ಇಳಿಯುವುದುಕಠಿಣವಾದ ಮತ್ತು ಅಪಾಯಕಾರಿ ಕೆಲಸ. ಆ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಇದು ಇನ್ನಷ್ಟು ಕಷ್ಟವಾಗುತ್ತಿದೆ ಎಂದು ವಿವರಿಸಿದ್ದಾರೆ.

ಎಎನ್‌–32 ವಿಮಾನ ಅಸ್ಸಾಂನ ಜೋರ್ಹಾಟ್‌ ವಾಯುನೆಲೆಯಿಂದ ಹಾರಾಟ ಆರಂಭಿಸಿ 33 ನಿಮಿಷಗಳಲ್ಲೇ ಸಂಪರ್ಕ ಕಡಿತಗೊಂಡಿತ್ತು. ಪರಿ ಪರ್ವತದಲ್ಲಿ ಪತನಗೊಂಡು 13 ಮಂದಿ ಸಾವನ್ನಪ್ಪಿದ್ದರು. ಇದರಲ್ಲಿ ಆರು ಮೃತದೇಹಗಳನ್ನು ಜೂನ್‌ 19 ರಂದು ಎತ್ತಲಾಗಿದ್ದರೆ ಇನ್ನುಳಿದ ಏಳು ಮೃತದೇಹಗಳನ್ನು ಮಾರನೇ ದಿನ ತೆಗೆಯಲಾಗಿತ್ತು.

ಈಗ ರಕ್ಷಣಾ ತಂಡವೇ ಸಿಲುಕಿರುವುದು ಅವರ ಕುಟುಂಬವನ್ನು ಆತಂಕಕ್ಕೀಡುಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.