
ಬಂಧನ
ಅಹಮದಾಬಾದ್(ಪಿಟಿಐ): ಲಂಚ ಪ್ರಕರಣವೊಂದರ ಜೊತೆ ಹಣ ಅಕ್ರಮ ವರ್ಗಾವಣೆ ನಂಟಿರುವ ಆರೋಪಕ್ಕೆ ಸಂಬಂಧಿಸಿ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಪಟೇಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.
2015 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಪಟೇಲ್ ಅವರು ಸುರೇಂದ್ರನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರು. ವಾರದ ಹಿಂದೆಯಷ್ಟೇ ಅವರನ್ನು ಯಾವುದೇ ಹುದ್ದೆ ತೋರಿಸದೇ ವರ್ಗಾವಣೆ ಮಾಡಲಾಗಿತ್ತು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಂದಾಯ ಅಧಿಕಾರಿ ಚಂದ್ರಸಿಂಗ್ ಮೋರಿ ಅವರನ್ನು ಬಂಧಿಸಿದ ನಂತರ, ಪಟೇಲ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ‘ಹಣ ವರ್ಗಾವಣೆಯ ಪ್ರಕರಣದಲ್ಲಿ ಲಂಚ ಪಡೆದಿರುವ ರಾಜೇಂದ್ರಕುಮಾರ್ ಪಟೇಲ್ ಅವರನ್ನು ಬಂಧಿಸಿರುವುದಾಗಿ’ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಇಸಿಐಆರ್ ದಾಖಲಾದ ನಂತರ, ಜಾರಿ ನಿರ್ದೇಶನಾಲಯ, ಮೋರಿ ಮತ್ತು ಇತರರು ಭಾಗಿಯಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸಿತು. ಇ.ಡಿ ನೀಡಿದ ದೂರಿನ ಆಧಾರದ ಮೇಲೆ, ಗುಜರಾತ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ರಾಜೇಂದ್ರಕುಮಾರ್ ಪಟೇಲ್, ಅವರ ಆಪ್ತ ಸಹಾಯಕ ಜಯರಾಜ್‌ಸಿನ್ಹ ಝಾಲಾ, ಗುಮಾಸ್ತ ಮಯೂರ್‌ಸಿನ್ಹ ಗೋಹಿಲ್ ಮತ್ತು ಉಪ ಮಮ್ಲತ್‌ದಾರ್ ಚಂದ್ರಸಿನ್ಹ ಮೋರಿ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.
ಭೂಪರಿವರ್ತನೆಗೆ ಸಲ್ಲಿಸಿದ ಅರ್ಜಿಗಳ ತ್ವರಿತ ಅನುಮೋದನೆಗಾಗಿ ಕಂದಾಯ ಅಧಿಕಾರಿ ಚಂದ್ರಸಿಂಗ್ ಮೋರಿ ಅರ್ಜಿದಾರರಿಂದ ಲಂಚ ಪಡೆದಿದ್ದಾರೆ. ಇದಕ್ಕಾಗಿ ಅವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಇ.ಡಿ, ಡಿ.23ರಂದು ಸುರೇಂದ್ರನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶೋಧಕಾರ್ಯ ಕೈಗೊಂಡಿತ್ತು. ಕಂದಾಯ ಅಧಿಕಾರಿಯಾಗಿದ್ದ ಮೋರಿ ಅವರನ್ನು ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.