ADVERTISEMENT

ರೈತ ಮಹಿಳೆಗೆ ಪರಿಹಾರ ವಿಳಂಬ: ಆಂಧ್ರದ ಐಎಎಸ್ ಅಧಿಕಾರಿಗಳಿಗೆ ಜೈಲು

ಪಿಟಿಐ
Published 2 ಸೆಪ್ಟೆಂಬರ್ 2021, 17:15 IST
Last Updated 2 ಸೆಪ್ಟೆಂಬರ್ 2021, 17:15 IST
   

ಅಮರಾವತಿ: ಫೆಬ್ರವರಿ 10, 2017ರ ಆದೇಶಕ್ಕೆ ಉದ್ದೇಶಪೂರ್ವಕವಾಗಿ ಅವಿಧೇಯತೆ ತೋರಿದ ನ್ಯಾಯಾಂಗ ನಿಂದನೆ ಆರೋಪದಡಿ ಆಂಧ್ರದ ನಾಲ್ವರು ಐಎಎಸ್ ಅಧಿಕಾರಿಗಳು ಮತ್ತು ಒಬ್ಬ ನಿವೃತ್ತ ಅಧಿಕಾರಿಗೆ ಆಂಧ್ರಪ್ರದೇಶ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. ಇದೇವೇಳೆ, ಮುಖ್ಯ ಕಾರ್ಯದರ್ಶಿ ಆದಿತ್ಯನಾಥ್ ಸೇರಿ ಮೂವರು ಅಧಿಕಾರಿಗಳ ವಿರುದ್ಧದ ಆರೋಪ ಕೈಬಿಡಲಾಗಿದೆ.

ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಂಶೀರ್ ಸಿಂಗ್ ರಾವತ್, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ರೇವು ಮುತ್ಯಾಲ ರಾಜು, ನೆಲ್ಲೂರು ಡಿಸಿ ಕೆ ವಿ ಎನ್ ಚಂದ್ರಧರಾ ಬಾಬು ಮತ್ತು ನಿವೃತ್ತ ಜಿಲ್ಲಾಧಿಕಾರಿ ಎಂ.ವಿ. ಶೇಷಗಿರಿ ಬಾಬು ಅವರಿಗೆ ಶಿಕ್ಷೆ ವಿಧಿಸಲಾಗಿದೆ. 2017ರಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಮನಮೋಹನ್ ಸಿಂಗ್ ಅವರನ್ನೂ ದೋಷಿ ಎಂದು ತೀರ್ಮಾನಿಸಲಾಗಿದೆ.

ರೈತ ಮಹಿಳೆ ತಲ್ಲಪಕ ಸಾವಿತ್ರಮ್ಮ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ಮೇಲಿನ ಆದೇಶವನ್ನು ನ್ಯಾಯಮೂರ್ತಿ ಬಟ್ಟು ದೇವಾನಂದ್ ಅವರು ಪ್ರಕಟಿಸಿದರು.

ADVERTISEMENT

ರಾವತ್ ಮತ್ತು ಸಿಂಗ್ ಅವರಿಗೆ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಇತರರಿಗೆ ಎರಡು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರತಿಯೊಬ್ಬರಿಗೂ ₹ 1,000 ದಂಡವನ್ನು ವಿಧಿಸಲಾಗಿದೆ.

ತನ್ನ ಮೂರು ಎಕರೆ ಅಳತೆಯ ಕೃಷಿ ಭೂಮಿಯನ್ನು ಕಂದಾಯ ಅಧಿಕಾರಿಗಳು ಯಾವುದೇ ಸೂಚನೆ ಅಥವಾ ಪರಿಹಾರ ಕೊಡದೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಗೆ ಹಂಚಿಕೆ ಮಾಡಿದ್ದಾರೆ ಎಂದು ಸಾವಿತ್ರಮ್ಮ 2017ರಲ್ಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಡಿಸೆಂಬರ್ 2016 ರಲ್ಲಿ, ಕಂದಾಯ ಅಧಿಕಾರಿಗಳು ಭೂಮಿಗೆ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆ ಬಗ್ಗೆ ಲೋಕಾಯುಕ್ತಕ್ಕೆ ತಿಳಿಸಿದ್ದಾಗಿಯೂ ಅವರು ಹೇಳಿದ್ದರು.

ಹೈಕೋರ್ಟ್‌ನ ನ್ಯಾಯಮೂರ್ತಿ ಎ ರಾಜಶೇಖರ್ ರೆಡ್ಡಿ, ಫೆಬ್ರವರಿ 10, 2017 ರಂದು ಅರ್ಜಿದಾರರ ಪರವಾಗಿ ತೀರ್ಪು ನೀಡಿದ್ದರು. ಮೂರು ತಿಂಗಳಲ್ಲಿ ಆಕೆಗೆ ಪರಿಹಾರ ನೀಡುವಂತೆ ಸಂಬಂಧಿಸಿದ ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದರು.

ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸಲು ಕಂದಾಯ ಅಧಿಕಾರಿಗಳು ವಿಫಲವಾದ ನಂತರ 2018 ರಲ್ಲಿ ಸಾವಿತ್ರಮ್ಮ ಅವರು ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.

ಈ ವರ್ಷ ಜೂನ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಆಲಿಸುವಾಗ ಪರಿಹಾರಕ್ಕೆ ಸಂಬಂಧಿಸಿದ ಬಿಲ್‌ಗಳನ್ನು ಕಂದಾಯ ವಿಭಾಗೀಯ ಅಧಿಕಾರಿಯು ಜುಲೈ 6, 2020 ರಂದು ಲೆಕ್ಕಾಧಿಕಾರಿ ಕಚೇರಿಗೆ ಸಲ್ಲಿಸಿದ್ದನ್ನು ನ್ಯಾಯಾಲಯ ಗಮನಿಸಿದ್ದು, ಮಾರ್ಚ್ 30, 2021ರವರೆಗೆ ಅವುಗಳು ತೆರವಾಗಿಲ್ಲ ಎಂಬುದನ್ನು ನ್ಯಾಯಾಧೀಶರು ಗಣನೆಗೆ ತೆಗೆದುಕೊಂಡರು.

‘ಬಿಲ್ಲುಗಳನ್ನು ತೆರವುಗೊಳಿಸಲು ಮತ್ತು ಅರ್ಜಿದಾರರಿಗೆ ಪರಿಹಾರವನ್ನು ಪಾವತಿಸಲು ಪ್ರಧಾನ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಸುಮಾರು ಎಂಟು ತಿಂಗಳು ವಿಳಂಬವಾಗಿರುವುದನ್ನು ನ್ಯಾಯಾಲಯ ಪರಿಗಣಿಸಿದೆ’ಎಂದು ನ್ಯಾಯಮೂರ್ತಿಗಳು ಹೇಳಿದರು.

ಆಗಸ್ಟ್‌ನಲ್ಲಿ, ನ್ಯಾಯಾಧೀಶರು ಪ್ರತಿವಾದಿಗಳ ವಾದಗಳನ್ನು ಆಲಿಸಿ, ತೀರ್ಪನ್ನು ಕಾಯ್ದಿರಿಸಿದ್ದರು.

ಇಂದು ತೀರ್ಪು ಪ್ರಕಟಿಸಿರುವ ಕೋರ್ಟ್ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.