ADVERTISEMENT

ಕೋವಿಶೀಲ್ಡ್‌: 3ನೇ ಹಂತದ ಪ್ರಯೋಗಕ್ಕೆ ನೋಂದಣಿ ಪೂರ್ಣ

ಪಿಟಿಐ
Published 12 ನವೆಂಬರ್ 2020, 9:02 IST
Last Updated 12 ನವೆಂಬರ್ 2020, 9:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ :ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ ಲಸಿಕೆಯು ಭಾರತದಲ್ಲಿ ಮೂರನೇ ಹಂತದ ಕ್ಲಿನಿಕಲ್‌ ಪ್ರಯೋಗ ನಡೆಸಲು ದಾಖಲಾತಿ ಪೂರ್ಣಗೊಳಿಸಿರುವುದಾಗಿ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಪ್ರಕಟಿಸಿದೆ.

‘ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ ಕೈಗೊಂಡಿರುವ ಕ್ರಮಕ್ಕೆ ಇದೊಂದು ಉತ್ತಮ ಉದಾಹರಣೆ‘ ಎಂದು ಐಸಿಎಂಆರ್ ಹೇಳಿಕೆಯಲ್ಲಿ ತಿಳಿಸಿದೆ. ಕ್ಲಿನಿಕಲ್ ಟ್ರಯಲ್‌ ನಡೆಸುತ್ತಿರುವ ಪ್ರದೇಶಗಳಿಗೆ ಐಸಿಎಂಆರ್‌ ಶುಲ್ಕವನ್ನು ಪಾವತಿಸುತ್ತಿದೆ. ಎಸ್‌ಐಐ ಸಂಸ್ಥೆ ಇತರೆ ಖರ್ಚುಗಳನ್ನು ಭರಿಸುತ್ತಿದೆ.

ಪ್ರಸ್ತುತ ಎಸ್‌ಐಐ ಮತ್ತು ಐಸಿಎಂಆರ್‌ ದೇಶದಾದ್ಯಂತ 15 ಕಡೆಗಳಲ್ಲಿ ಎರಡನೇ ಹಂತದ ಕ್ಲಿನಿಕಲ್‌ ಟ್ರಯಲ್‌ಗಳನ್ನು ಪೂರ್ಣಗೊಳಿಸಿದೆ. ಈ ಪ್ರಯೋಗಕ್ಕಾಗಿ ಅಕ್ಟೋಬರ್ 31ರೊಳಗೆ 1,600 ಮಂದಿಯನ್ನು ನೋಂದಣಿ ಮಾಡಿಕೊಳ್ಳಲಾಗಿದೆ.

ADVERTISEMENT

‘ಇದುವರೆಗೆ ಕೋವಿಶೀಲ್ಡ್‌ ಲಸಿಕೆಯ ಪ್ರಯೋಗಗಳ ಫಲಿತಾಂಶ ಪರಿಣಾಮಕಾರಿಯಾಗಿದ್ದು, ಭರವಸೆಯ ಫಲಿತಾಂಶಗಳನ್ನು ನೀಡಿದೆ. ಇದು ವಾಸ್ತವಿಕ ಪರಿಹಾರವಾಗಬಹುದೆಂಬ ವಿಶ್ವಾಸ ನೀಡುತ್ತಿದೆ. ಈ ಲಸಿಕೆ ಭಾರತದಲ್ಲಿ ಮಾನವ ಪರೀಕ್ಷೆಯಲ್ಲಿ ಅತ್ಯಂತ ಸುಧಾರಿತ ಲಸಿಕೆಯಾಗಲಿದೆ‘ ಎಂದು ಐಸಿಎಂಆರ್ ಹೇಳಿದೆ.

‘ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ಗಳ ಫಲಿತಾಂಶಗಳ ಆಧಾರದ ಮೇಲೆ, ಐಸಿಎಂಆರ್ ನೆರವಿನೊಂದಿಗೆ ಎಸ್‌ಐಐ ಸಂಸ್ಥೆ ಲಸಿಕೆಯನ್ನು ಭಾರತಕ್ಕೆ ಬೇಗ ತರಿಸಿಕೊಳ್ಳಲಿದೆ. ಎಸ್‌ಐಐ ಈಗಾಗಲೇ 4 ಕೋಟಿ ಡೋಸ್‌ ಲಸಿಕೆಗಳನ್ನು ಉತ್ಪಾದಿಸಿದೆ‘ ಎಂದು ಉನ್ನತ ಆರೋಗ್ಯ ಸಂಶೋಧನಾ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.