ನವದೆಹಲಿ: ‘ಸಾಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ಕರ್ತವ್ಯ ನಿರ್ವಹಿಸಲು ನಿರಾಕರಿಸಿದರೆ ಅಥವಾ ರಾಜ್ಯ ವಿಧಾನಸಭೆ ಅಂಗೀಕಾರ ನೀಡಿರುವ ಮಸೂದೆಯ ವಿಚಾರವಾಗಿ ರಾಜ್ಯಪಾಲರು ನಿಷ್ಕ್ರಿಯತೆ ತೋರಿದರೆ ಸಾಂವಿಧಾನಿಕ ನ್ಯಾಯಾಲಯಗಳು ಕೈಕಟ್ಟಿ ಕುಳಿತುಕೊಳ್ಳಬಹುದೇ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರವನ್ನು ಕೇಳಿದೆ.
ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಕೆಲವು ರಾಜ್ಯಪಾಲರು ವಿಧಾನಸಭೆ ಅಂಗೀಕರಿಸಿದ ಮಸೂದೆಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ನ್ಯಾಯಾಂಗದ ಮೂಲಕ ಪರಿಹಾರ ಕಂಡುಕೊಳ್ಳುವ ಬದಲು ರಾಜಕೀಯ ಪರಿಹಾರಗಳನ್ನು ಅನ್ವೇಷಿಸಬೇಕಾಗುತ್ತದೆ’ ಎಂದಾಗ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಈ ಹೇಳಿಕೆ ನೀಡಿದೆ.
ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕಲು ಕಾಲಮಿತಿ ನಿಗದಿಪಡಿಸಬಹುದೇ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಲ್ಲೇಖಿಸಿರುವ ಸಾಂವಿಧಾನಿಕ ಪ್ರಶ್ನೆಗಳ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ವಿಕ್ರಮನಾಥ್, ಪಿ.ಎಸ್.ನರಸಿಂಹ ಮತ್ತು ಎ.ಎಸ್.ಚಂದೂರ್‌ರ್ಕರ್ ಅವರು ಪೀಠದಲ್ಲಿದ್ದಾರೆ.
‘ಸಾಂವಿಧಾನಿಕ ಹುದ್ದೆಯಲ್ಲಿರುವವರು ಸಕಾರಣವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸದಿದ್ದರೆ, ಸಾಂವಿಧಾನಿಕ ನ್ಯಾಯಾಲಯಗಳು ಕೈಗಳನ್ನು ಕಟ್ಟಿ ಕುಳಿತುಕೊಳ್ಳಬಹುದೇ’ ಎಂದು ಸಿಜೆಐ ಗವಾಯಿ ಅವರು ಮೆಹ್ತಾ ಅವರನ್ನು ಕೇಳಿದರು.
ಎಲ್ಲಾ ಸಮಸ್ಯೆಗಳಿಗೂ ನ್ಯಾಯಾಲಯಗಳಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಾದಕ್ಕೆ ಆದ್ಯತೆ ನೀಡಬೇಕು ಎಂದು ಮೆಹ್ತಾ ವಿಚಾರಣೆ ವೇಳೆ ವಾದಿಸಿದರು.
ಪರಿಶೀಲನೆಗಾಗಿ ರಾಜ್ಯಪಾಲರಿಂದ ಬಂದ ಮಸೂದೆಗಳ ವಿಚಾರವಾಗಿ ರಾಷ್ಟ್ರಪತಿಯವರು ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಏಪ್ರಿಲ್ 8ರಂದು ಹೇಳಿತ್ತು. ಅದರ ಬೆನ್ನಲ್ಲೇ, ರಾಷ್ಟ್ರಪತಿಯವರು ಸುಪ್ರೀಂ ಕೋರ್ಟ್‌ಗೆ ಐದು ಪುಟಗಳ ಪತ್ರ ಬರೆದು, 14 ಪ್ರಶ್ನೆಗಳನ್ನು ಕೇಳಿದ್ದರು.
ಮಧ್ಯಪ್ರವೇಶಿಸುವ ಅಧಿಕಾರ ಇಲ್ಲವೇ?
ಮಸೂದೆಯ ವಿಚಾರವಾಗಿ ರಾಜ್ಯಪಾಲರು ಹಲವು ವರ್ಷ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ರಾಜ್ಯ ಶಾಸನಸಭೆಗಳನ್ನು ‘ನಿಸ್ತೇಜ’ಗೊಳಿಸಿದರೆ ಮಧ್ಯಪ್ರವೇಶಿಸುವ ಅಧಿಕಾರ ನ್ಯಾಯಾಲಯಗಳಿಗೆ ಇಲ್ಲವೇ ಎಂದು ಸುಪ್ರೀಂ ಕೋರ್ಟ್ ಪೀಠವು ಕೇಂದ್ರ ಸರ್ಕಾರವನ್ನು ಕೇಳಿದೆ.
ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸುವುದರಿಂದ ತನ್ನನ್ನು ತಾನು ತಡೆದಿಟ್ಟುಕೊಳ್ಳಬೇಕು ಎಂಬ ತುಷಾರ್ ಮೆಹ್ತಾ ಅವರ ವಾದಕ್ಕೆ ಪ್ರತಿಕ್ರಿಯೆಯಾಗಿ ಪೀಠವು ಹೀಗೆ ಹೇಳಿದೆ. ‘ವಿಧಾನಸಭೆಯು ಸರ್ವಾನುಮತದಿಂದ ಮಸೂದೆಯನ್ನು ಅಂಗೀಕರಿಸುತ್ತದೆ. ರಾಜ್ಯಪಾಲರು ಆ ಮಸೂದೆ ಬಗ್ಗೆ ಯಾವುದೆ ನಿರ್ಧಾರ ತೆಗೆದುಕೊಳ್ಳದಿದ್ದರೆ ವಾಸ್ತವವಾಗಿ ಶಾಸಕಾಂಗವನ್ನು ನಿಷ್ಕ್ರಿಯಗೊಳಿಸಿದಂತೆ ಆಗುತ್ತದೆ’ ಎಂದು ಪೀಠ ಹೇಳಿತು.
‘ನ್ಯಾಯಿಕ ಭಯೋತ್ಪಾದನೆ ಆಗಬಾರದು’
‘ನ್ಯಾಯಾಂಗದ ಕ್ರಿಯಾಶೀಲತೆಯು ನ್ಯಾಯಿಕ ಭಯೋತ್ಪಾದನೆಯಾಗಿ ಬದಲಾಗಬಾರದು’ ಎಂಬ ಅಭಿಪ್ರಾಯವನ್ನು ಸಿಜೆಐ ಬಿ.ಆರ್.ಗವಾಯಿ ಅವರು ವ್ಯಕ್ತಪಡಿಸಿದರು. ‘ಸಾಕಷ್ಟು ಅನುಭವ ಹೊಂದಿರುವ ಜನಪ್ರತಿನಿಧಿಗಳನ್ನು ಎಂದಿಗೂ ಕಡೆಗಣಿಸಬಾರದು’ ಎಂದು ತುಷಾರ್ ಮೆಹ್ತಾ ಹೇಳಿದಾಗ ಸಿಜೆಐ ಈ ಪ್ರತಿಕ್ರಿಯೆ ನೀಡಿದರು. ‘ಜನಪ್ರತಿನಿಧಿಗಳ ವಿಚಾರವಾಗಿ ನಾವು ಯಾವತ್ತೂ ಏನನ್ನೂ ಹೇಳಿಲ್ಲ. ನ್ಯಾಯಾಂಗದ ಕ್ರಿಯಾಶೀಲತೆಯು ನ್ಯಾಯಿಕ ಭಯೋತ್ಪಾದನೆ ಅಥವಾ ಸಾಹಸ ಆಗಬಾರದು ಎಂದು ನಾನು ಹೇಳುತ್ತಲೇ ಬಂದಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.