ADVERTISEMENT

ವಾಯು ಮಾಲಿನ್ಯ ತಗ್ಗಿಸಲು ಐಐಟಿ, ಎನ್‌ಐಟಿಗಳು ಶ್ರಮಿಸಬೇಕು: ರಾಷ್ಟ್ರಪತಿ

ಪಿಟಿಐ
Published 19 ನವೆಂಬರ್ 2019, 20:00 IST
Last Updated 19 ನವೆಂಬರ್ 2019, 20:00 IST
   

ನವದೆಹಲಿ: ವಾಯುಮಾಲಿನ್ಯ ಸಮಸ್ಯೆಗೆ ದೇಶದ ಐಐಟಿ ಮತ್ತು ಎನ್‌ಐಟಿಗಳು ಅಗತ್ಯ ಪರಿಹಾರ ಸೂಚಿಸಬಲ್ಲವು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ವಾರ್ಷಿಕ ಸಂದರ್ಶಕರ ಸಭೆಯಲ್ಲಿ ಅವರು ಮಾತನಾಡಿದರು. ದೇಶದ 23 ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ), 31 ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್‌ಐಟಿ) ಮತ್ತು ಭಾರತೀಯ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆ (ಐಐಇಎಸ್‌ಟಿ)ಯ ನಿರ್ದೇಶಕರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಕುರಿತು ವಿದ್ಯಾರ್ಥಿಗಳು ಮತ್ತು ಸಂಶೋಧಕರು ಹೆಚ್ಚು ಸಂಶೋಧನೆಗಳಲ್ಲಿ ತೊಡಗುವಂತೆ ಪ್ರೇರೇಪಿಸಲು ಅವರು ಸೂಚಿಸಿದರು.‌

ADVERTISEMENT

ಈ ವರ್ಷದೇಶದ ರಾಜಧಾನಿ ಸೇರಿದಂತೆ ಹಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಹಲವು ವಿಜ್ಞಾನಿಗಳು, ಸಂಶೋಧಕರು ಈ ಸಂಬಂಧ ಭವಿಷ್ಯದ ಸನ್ನಿವೇಶಗಳ ಕುರಿತು ವಿಶ್ಲೇಷಿಸಿ ಆಂತಕ ವ್ಯಕ್ತಪಡಿಸಿದ್ದಾರೆ. ನಮ್ಮ ನಗರಗಳಲ್ಲಿನ ಹೊಂಜು ಮತ್ತು ಕಳಪೆ ಗೋಚರತೆಯು ಭವಿಷ್ಯದಲ್ಲಿ ಎದುರಾಗಬಹುದಾದ ಆತಂಕವು ಈಗಲೇ ಬಂದಿದೆಯೇನೋ ಎಂದು ಭಾಸವಾಗುತ್ತಿದೆ ಎಂಬುದಾಗಿ ಅವರು ಕಳವಳ ವ್ಯಕ್ತಪಡಿಸಿದರು.

‘ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂಬ ಭರವಸೆ ನನಗಿದೆ’ ಎಂದು ಅವರು ಹೇಳಿದದರು.

ಸಮರ್ಪಕ ನೀತಿಗೆ ಬಿಎಸ್‌ಪಿ ಆಗ್ರಹ:ದೆಹಲಿ ಹಾಗೂ ದೇಶದ ಇತರ ನಗರಗಳನ್ನು ಭೀಕರವಾಗಿ ಕಾಡುತ್ತಿರುವ ವಾಯುಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಲು ಸಮರ್ಪಕ ನೀತಿಯನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಪ್ರತಿಪಾದಿಸಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿಟ್ಟಿನಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.