ಮುಂಬೈ/ಇಡುಕ್ಕಿ/ಭುವನೇಶ್ವರ: ಮಹಾರಾಷ್ಟ್ರ, ಕೇರಳ ಮತ್ತು ಒಡಿಶಾದಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ತಗ್ಗುಪ್ರದೇಶಗಳು, ಕೃಷಿ ಭೂಮಿ ಮತ್ತು ರಸ್ತೆಗಳು ಜಲಾವೃತಗೊಂಡಿವೆ.
ಮಹಾರಾಷ್ಟ್ರ, ಒಡಿಶಾದ ಹಲವೆಡೆ ಇನ್ನೂ ಕೆಲ ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕೇರಳದಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಇಡುಕ್ಕಿ, ಮಲಪ್ಪುರ ಸೇರಿದಂತೆ ಹಲವು ಡ್ಯಾಂಗಳಿಂದ ನೀರನ್ನು ಹೊರಬಿಡಲಾಗಿದೆ.
ಮಹಾರಾಷ್ಟ್ರದ ಉತ್ತರ ಕೊಂಕಣ ಮತ್ತು ಉತ್ತರ ಕೇಂದ್ರ, ಪೂರ್ವ ಮತ್ತು ಪಶ್ಚಿಮ ವಿದರ್ಭ ಪ್ರದೇಶಗಳಲ್ಲಿ ಇದೇ 12ರ ವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮರಾಠವಾಡ, ದಕ್ಷಿಣ ಕೇಂದ್ರ ಮಹಾರಾಷ್ಟ್ರ, ದಕ್ಷಿಣ ಕೊಂಕಣ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಸೋಮವಾರ ರಾತ್ರಿಯಿಂದ ಮುಂಬೈನಲ್ಲಿ ಗಾಳಿಸಹಿತ ಭಾರಿ ಮಳೆ ಸುರಿಯುತ್ತಿದ್ದು, ಅಂಧೇರಿ ಮುಂತಾದ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಇದರಿಂದ ರೈಲು ಮತ್ತು ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಕೇರಳದ ಡ್ಯಾಂಗಳು ಭರ್ತಿ: ಕೇರಳದ ಇಡುಕ್ಕಿ ಜಲಾಶಯದ ನೀರಿನ ಮಟ್ಟ ಅಪಾಯದ ಮಟ್ಟ ಸಮೀಪಿಸುತ್ತಿದೆ. ಪೆರಿಯಾರ್ ಮತ್ತು ಚೆರುತೋನಿ ಡ್ಯಾಂ ತಟದಲ್ಲಿ ವಾಸಿಸುವ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ವಯನಾಡಿನ ಬಾಣಾಸುರ ಸಾಗರ ಅಣೆಕಟ್ಟೆಯಲ್ಲೂ ನೀರಿನ ಮಟ್ಟ ಏರಿಕೆಯಾಗಿದ್ದು, ಅಣೆಕಟ್ಟೆಯ ಎರಡು ಗೇಟುಗಳನ್ನು ತೆರೆಯಲಾಗಿದೆ. ಇದರಿಂದ ಕರ್ನಾಟಕದ ಕಬಿನಿ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆ ಕುಸಿದು 6 ಮಂದಿಗೆ ಗಾಯ: ಒಡಿಶಾದ ನವರಂಗಪುರದಲ್ಲಿ ಮನೆ ಕುಸಿದು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನೌಪದದಲ್ಲಿ ಸೇತುವೆಯೊಂದು ಕೊಚ್ಚಿ ಹೋಗಿದೆ. ಬಾರ್ಗಡ್, ಸಂಬಾಲ್‌ಪುರ್, ಅಂಗುಲ್ ಮುಂತಾದ ಜಿಲ್ಲೆಗಳಲ್ಲಿ ಬುಧವಾರದವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಗುರುವಾರದವರೆಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.