ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಶ್ಮೀರ ಸಮಸ್ಯೆ ಇತ್ಯರ್ಥ: ಇಮ್ರಾನ್ ಖಾನ್

ಮೋದಿ ಮೇಲೆ ಮುಗಿಬಿದ್ದ ವಿಪಕ್ಷಗಳು

ಪಿಟಿಐ
Published 10 ಏಪ್ರಿಲ್ 2019, 18:24 IST
Last Updated 10 ಏಪ್ರಿಲ್ 2019, 18:24 IST
   

ಇಸ್ಲಾಮಾಬಾದ್/ನವದೆಹಲಿ: ‘ಭಾರತದಲ್ಲಿ ಬಿಜೆಪಿಮತ್ತೆ ಅಧಿಕಾರಕ್ಕೆ ಬಂದರೆ, ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಶಾಂತಿ ಮಾತುಕತೆ ನಡೆಸುವ ಅವಕಾಶಗಳು ಹೆಚ್ಚು’ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಮಾಧ್ಯಮಪ್ರತಿನಿಧಿಗಳ ಜತೆ ನಡೆದ ಸಂವಾದದಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ಈಗ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕಾಶ್ಮೀರ ಸಮಸ್ಯೆ ಇತ್ಯರ್ಥದ ಸಾಧ್ಯತೆಗಳು ತೀರಾ ಕಡಿಮೆ. ಈ ವಿಚಾರದಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ತಮಗೆ ಮುಳುವಾಗಬಹುದು ಎಂಬ ಭಯ ಕಾಂಗ್ರೆಸ್‌ಗೆ ಇದೆ. ಆದರೆ ಬಲಪಂಥೀಯ ಪಕ್ಷವಾಗಿರುವ ಬಿಜೆಪಿ ಅಧಿಕಾರಕ್ಕೆ ಬಂದರೆ ಸಮಸ್ಯೆ ಇತ್ಯರ್ಥದ ಸಾಧ್ಯತೆಗಳು ಹೆಚ್ಚು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಮತ್ತೆ ದಾಳಿಯ ಕಳವಳ:ನರೇಂದ್ರ ಮೋದಿ ಅವರು ‘ಭಯ’ ಮತ್ತು ‘ರಾಷ್ಟ್ರೀಯತೆ’ಯನ್ನು ಬಳಸಿಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಭಾರತವು ಪಾಕಿಸ್ತಾನದ ಮೇಲೆ ಮತ್ತೆ ದಾಳಿ ನಡೆಸಬಹುದು ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ತಿಂಗಳಲ್ಲಿ ಪಾಕಿಸ್ತಾನದ ಮೇಲೆ ಭಾರತವು ದಾಳಿ ನಡೆಸಲಿದೆ ಎಂದು ಗುಪ್ತಚರ ಮಾಹಿತಿಗಳು ಹೇಳುತ್ತಿವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಹೇಳಿದ್ದರು. ಅದರ ಬೆನ್ನಲ್ಲೇ ಇಮ್ರಾನ್ ಖಾನ್ ಸಹ ಅದೇ ಮಾತು ಹೇಳಿದ್ದಾರೆ.

ಮುಸ್ಲಿಮರಿಗೆ ಪರಕೀಯತೆ:‘ಭಾರತದಲ್ಲಿ ಈಗ ಮುಸ್ಲಿಮರ ಮೇಲಿನ ದಾಳಿಗಳು ಹೆಚ್ಚಾಗಿವೆ. ಭಾರತದಲ್ಲಿ ಇಂತಹ ಪರಿಸ್ಥಿತಿ ಬರುತ್ತದೆ ಎಂದು ನಾನು ಯಾವತ್ತೂ ಕಲ್ಪಿಸಿಕೊಂಡಿರಲಿಲ್ಲ. ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕಾಶ್ಮೀರದ ಮುಸ್ಲಿಮರು ಮತ್ತು ಭಾರತದ ಎಲ್ಲಾ ಮುಸ್ಲಿಮರಿಗೆ ಪರಕೀಯತೆ ಕಾಡುತ್ತಿದೆ’ ಎಂದು ಅವರು ಟೀಕಿಸಿದ್ದಾರೆ.

‘ಭಾರತದಲ್ಲಿರುವ ಹಲವು ಮುಸ್ಲಿಮರ ಪರಿಚಯ ನನಗಿದೆ. ಈ ಹಿಂದೆ (ಮೋದಿ ಸರ್ಕಾರ ಬರುವುದಕ್ಕೂ ಮೊದಲು) ಅವರಿದ್ದ ಸ್ಥಿತಿ ಬಗ್ಗೆ ಅವರಿಗೆ ಸಂತೋಷವಿತ್ತು. ಆದರೆ ಈಗ ಆ ಸಂತೋಷವಿಲ್ಲ. ಈಗ ಅವರೆಲ್ಲಾ ಹಿಂದು ರಾಷ್ಟ್ರೀಯತೆಯ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಮೋದಿಗೂ ಪಾಕ್‌ಗೂ ಸಂಬಂಧವೇನು?’

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್ ನೀಡಿರುವ ಹೇಳಿಕೆಯನ್ನು ಬಳಸಿಕೊಂಡು ವಿರೋಧ ಪಕ್ಷಗಳು ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿವೆ. ಇಮ್ರಾನ್‌ ಖಾನ್ ಅವರ ಹೇಳಿಕೆಯನ್ನೂ ವಿಪಕ್ಷಗಳು ಟೀಕಿಸಿವೆ.

‘ವಿದೇಶಿ ಸರ್ಕಾರಗಳು ನಮ್ಮ ಚುನಾವಣೆಯನ್ನು ಪ್ರಭಾವಿಸುತ್ತಿವೆ. ಭಾರತಕ್ಕೆ ಮತ್ತೆ ಪ್ರಧಾನಿಯಾಗಿ ಮೋದಿಯೇ ಆಯ್ಕೆಯಾಗಬೇಕು ಎಂದು ಈ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹೇಳಿತ್ತು. ಈಗ ಪಾಕ್‌ ಪ್ರಧಾನಿಯೇ ಆ ಮಾತು ಹೇಳಿದ್ದಾರೆ. ಆದರೆ ಮೋದಿ ಮಾತ್ರ ಪಾಕಿಸ್ತಾನದ ಜತೆಗೆವಿರೋಧ ಪಕ್ಷಗಳಿಗೆ ಸಂಬಂಧ ಕಲ್ಪಿಸಲು ಪ್ರಯತ್ನಿಸುತ್ತಲೇ ಇದ್ದಾರೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಿಸಿದ್ದಾರೆ.

‘ಭಾರತದ ಆಂತರಿಕ ವಿಚಾರದಲ್ಲಿ ತಲೆ ಹಾಕಲು ಇಮ್ರಾನ್ ಖಾನ್ ಯಾರು? ಭಾರತದ ಪ್ರಧಾನಿ ಯಾರಾಗಬೇಕು ಎಂಬುದನ್ನು ಭಾರತದ ಜನರು ನಿರ್ಧರಿಸುತ್ತಾರೆ. ಅದು ಇಮ್ರಾನ್ ಖಾನ್‌ನ ಕೆಲಸವಲ್ಲ. ಎರಡು ದೇಶಗಳ ನಡುವಣ ಸಮಸ್ಯೆಯನ್ನು ಬೇರೆ ಪಕ್ಷಗಳು ಬಗೆಹರಿಸುವುದಿಲ್ಲ ಎಂದು ಇಮ್ರಾನ್ ಅದು ಹೇಗೆ ಹೇಳುತ್ತಾರೆ’ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

***

ಒಂದೆರಡು ವಾರಗಳಲ್ಲಿ ಚುನಾವಣಾ ಅಲೆಯು ಮೋದಿಗೆ ವಿರುದ್ಧವಾಗಿ ಪರಿವರ್ತಿತವಾದರೆ, ಭಾರತವು ಪಾಕ್‌ ಮೇಲೆ ಸೇನಾ ಕಾರ್ಯಾಚರಣೆ ನಡೆಸುವ ಸಾಧ್ಯತೆಗಳು ಹೆಚ್ಚು.

–ಇಮ್ರಾನ್ ಖಾನ್, ಪಾಕಿಸ್ತಾನ ಪ್ರಧಾನಿ

ಪಾಕಿಸ್ತಾನ ಮೋದಿ ಜತೆ ಮೈತ್ರಿಯಲ್ಲಿದೆ ಎಂಬುದು ಈಗ ಅಧಿಕೃತ. ಮೋದಿಗೆ ಹಾಕುವ ಮತ ಪಾಕ್‌ಗೆ ಹಾಕಿದಂತೆ. ಮೊದಲು ಷರೀಫ್ ಈಗ ಇಮ್ರಾನ್ ಜತೆ ಗೆಳೆತನ.

–ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದಿರುವ ಖಾನ್ ಅವರನ್ನು ಹೊಗಳಬೇಕೇ ಅಥವಾ ತೆಗಳಬೇಕೇ ಎಂಬುದು ಗೊತ್ತಾಗದೆ ಭಕ್ತರು ತಮ್ಮ ತಲೆ ಕೆರೆದುಕೊಳ್ಳಲು ಆರಂಭಿಸಿದ್ದಾರೆ.

–ಮೆಹಬೂಬಾ ಮುಫ್ತಿ, ಪಿಡಿಪಿ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.