ADVERTISEMENT

‘ಭಾರತವನ್ನು ವಿಶ್ವವೇ ಗಣನೆಗೆ ತೆಗೆದುಕೊಳ್ಳುವಂತಹ ದೇಶವನ್ನಾಗಿ ಬದಲಿಸಿದ ಮೋದಿ’

ಏಜೆನ್ಸೀಸ್
Published 17 ಸೆಪ್ಟೆಂಬರ್ 2020, 8:59 IST
Last Updated 17 ಸೆಪ್ಟೆಂಬರ್ 2020, 8:59 IST
   

ಲಖನೌ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನು ಕಳೆದ ಆರು ವರ್ಷಗಳಲ್ಲಿ ವಿಶ್ವವೇ ಗಣನೆಗೆ ತೆಗೆದುಕೊಳ್ಳುವಂತಹ ರಾಷ್ಟ್ರವನ್ನಾಗಿ ಬದಲಿಸಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಭಿಪ್ರಾಯಪಟ್ಟಿದ್ದಾರೆ.

‘ಮಾನವಕುಲದತ್ತ ಪ್ರಶ್ನಾತೀತ ಸೇವಾ ಪ್ರಜ್ಞೆ,ಅನಿಯಂತ್ರಿತ ಸದಾಚಾರ ಮತ್ತು ಅಗಾಧ ಸಂವೇದನೆ ಹೊಂದಿರುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ನಾಯಕ, ಸಲಹೆಗಾರ ಮತ್ತು ಮಾರ್ಗದರ್ಶಿ ದೊರೆತಿರುವುದೇ ನನಗೆ ಆಶೀರ್ವಾದವಾಗಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಜೊತೆಗೆಲೇಖನವೊಂದನ್ನೂ ಹಂಚಿಕೊಂಡಿದ್ದಾರೆ.

‘ಸ್ವಾತಂತ್ರ್ಯದ ನಂತರ ದೇಶದಲ್ಲಿ ನಾಯಕರು ಮಾತನಾಡುತ್ತಿದ್ದ ಸಮಾಜದ ಕೊನೆಯ ವ್ಯಕ್ತಿ, ಅಲ್ಲೇ ಉಳಿದಿದ್ದರು. ಆದರೆ, ಇದೀಗ ಕಲ್ಯಾಣದ ಪ್ರಯತ್ನಗಳು ಮತ್ತು ಮೌಲಸೌಕರ್ಯದ ಕಾರ್ಯಗಳು ಸಾಮಾನ್ಯ ವ್ಯಕ್ತಿಯನ್ನು ತಲುಪುತ್ತಿವೆ. ಜನಸಾಮಾನ್ಯರ ನೀತಿ, ಮನಸ್ಥಿತಿ ಮತ್ತು ಮನೋಭಾವಗಳನ್ನು ಗ್ರಹಿಸಿ ಅಂತ್ಯೋದಯದಿಂದರಾಷ್ಟ್ರೋದಯದತ್ತ ಕರೆದೊಯ್ಯುವುದು ಮೋದಿಯಂತಹ ಸಹಾನೂಭೂತಿಯ ವ್ಯಕ್ತಿಯಿಂದ ಸಾಧ್ಯವಾಯಿತು. ಇದು ನಿಜವಾಗಿಯೂ ಜನಸಾಮಾನ್ಯರ ಶಕ್ತಿಯನ್ನು ರಾಷ್ಟ್ರ ನಿರ್ಮಾಣದೊಂದಿಗೆ ಜೋಡಿಸುವುದಕ್ಕೆ ಸೂಕ್ತ ಉದಾಹರಣೆಯಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಮೋದಿ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿರುವ ಯೋಗಿ, ‘ಮೋದಿ ಅವರು ಬಡ ಯುವಕರು, ರೈತರು ಮತ್ತು ಮಹಿಳೆಯರನ್ನು ‘ಸಬ್‌ ಕಾ ಸಾಥ್‌– ಸಬ್‌ ಕಾ ವಿಕಾಸ್‌’ ಘೋಷಣೆಯಡಿಯಲ್ಲಿ ಒಂದುಗೂಡಿಸಿದ್ದಾರೆ. ಬೇಟಿ ಪಡಾವೊ–ಬೇಟಿ ಬಚಾವೊ ಅಥವಾ ಉಜ್ವಲ್‌ ಬಿಮಾ ಯೋಜನೆಯನ್ನೇ ತೆಗೆದುಕೊಳ್ಳಿ. ಇವು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿವೆ. ಇದರಿಂದ ಮಹಿಳೆಯರು ಸ್ವಾಭಿಮಾನ ಮತ್ತು ಸ್ವಾಲಂಬನೆಯ ಭಾವನೆಯನ್ನು ಹೊಂದಲು ಸಾಧ್ಯವಾಗಿದೆ. ತ್ರಿವಳಿ ತಲಾಖ್‌ ನಿರ್ಮೂಲನೆಯನ್ನು ಮರೆಯುವುದು ಹೇಗೆ? ಈ ಕ್ರಮಗಳ ಮೂಲಕ ಪ್ರಧಾನಿ ಮೋದಿ ಅವರು ಮಹಿಳೆಯರ ಗೌರವವನ್ನು ಪುನಃ ಸ್ಥಾಪಿಸಲು ಸಾಧ್ಯವಾಗಿದೆ’ ಎಂದು ಹೇಳಿದ್ದಾರೆ.

‘ಇಂತಹ ನಿಯಂತರ ಪ್ರಯತ್ನಗಳ ಮೂಲಕ ಪ್ರಧಾನಿ ಮೋದಿ ಅವರು ಮಹಾನ್‌ ದೇಶದ ಪುರಾತನ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳನ್ನು ಪುನಃ ಸ್ಥಾಪಿಸಲು ಕಾರಣವಾಗಿದೆ.ಭಾರತವು ನಮಾಮಿ ಗಂಗೆ, ವಿಶ್ವ ಯೋಗ ದಿನ, ಅಯೋಧ್ಯೆಯ ಶ್ರೀರಾಮ ದೇವಾಲಯಕ್ಕೆ ಅಡಿಪಾಯ ಹಾಕಿದ್ದು ಹಾಗೂ ಪ್ರಯಾಗದಲ್ಲಿ ಕುಂಭಮೇಳ ಆಚರಣೆಯ ಮೂಲಕ ಜಾಗತಿಕ ಮನ್ನಣೆ ಸಿಗುವಂತೆ ಮಾಡಿದ್ದಾರೆ’ ಎಂದು ಹೊಗಳಿದ್ದಾರೆ.

ದೇಶವು ಕಳೆದ ಹಲವು ದಶಕಗಳಿಂದ ರಕ್ಷಣಾ ಸವಾಲುಗಳನ್ನು ಎದುರಿಸುತ್ತಿತ್ತು. ಮೋದಿ ಅವರು ಅವುಗಳನ್ನು ನಿವಾರಿಸಿ ಪ್ರಬಲ ಭಾರತಕ್ಕೆ ಭದ್ರವಾದ ಅಡಿಪಾಯ ಹಾಕಿದ್ದಾರೆ.ಸಂವಿಧಾನದ 370ನೇ ವಿಧಿಯು ದಶಕಗಳಿಂದ ದೇಶವನ್ನು ಭೇಟೆಯಾಡಿತ್ತು. ‘ಒಂದೇ ಭಾರತ; ಶ್ರೇಷ್ಠ ಭಾರತ’ ಘೋಷಣೆಯ ಮೂಲಕ ಅದನ್ನು ತೆಗೆದುಹಾಕಿದ್ದಾರೆ. ಈಶಾನ್ಯ ಭಾರತ ಮತ್ತು ಕಾಶ್ಮೀರದಲ್ಲಿ ಶಾಂತಿ ಸೌಹಾರ್ದತೆ ನೆಲೆಸುವಂತೆ ಮಾಡಿದ್ದಾರೆ ಎಂದೂ ಶ್ಲಾಘಿಸಿದ್ದಾರೆ.

ಇಂದುಮೋದಿ ಅವರ 70ನೇ ಜನ್ಮದಿನವಾಗಿದ್ದು, ಇದರ ಅಂಗವಾಗಿ ಬಿಜೆಪಿಯು ಇದೇ ತಿಂಗಳ 14ರಿಂದ 20ರ ವರೆಗೆ ‘ಸೇವಾ ಸಪ್ತಾಹ’ವನ್ನು ಆಯೋಜಿಸಿದೆ. ಈ ‘ಸಪ್ತಾಹ’ದ ಭಾಗವಾಗಿ ಪಕ್ಷವು ದೇಶದಾದ್ಯಂತ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.