ADVERTISEMENT

8 ವರ್ಷಗಳ ಮೋದಿ ಅಧಿಕಾರವಧಿಯಲ್ಲಿ ರಾಷ್ಟ್ರದ ಭದ್ರತೆ ದುರ್ಬಲವಾಗಿದೆ: ಸ್ವಾಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಏಪ್ರಿಲ್ 2022, 10:15 IST
Last Updated 19 ಏಪ್ರಿಲ್ 2022, 10:15 IST
ನರೇಂದ್ರ ಮೋದಿ ಮತ್ತು ಸುಬ್ರಮಣಿಯನ್‌ ಸ್ವಾಮಿ
ನರೇಂದ್ರ ಮೋದಿ ಮತ್ತು ಸುಬ್ರಮಣಿಯನ್‌ ಸ್ವಾಮಿ    

ನವದೆಹಲಿ: 8 ವರ್ಷಗಳ ಮೋದಿ ಅಧಿಕಾರವಧಿಯಲ್ಲಿ ರಾಷ್ಟ್ರೀಯ ಭದ್ರತೆಯು ಭಾರಿ ದುರ್ಬಲಗೊಂಡಿದೆ. ಚೀನಾದ ಬಗ್ಗೆ ಮೋದಿ ಅವರಿಗೆ ಅರ್ಥ ಮಾಡಿಕೊಳ್ಳಲೂ ಆಗಿಲ್ಲ’ ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಮಂಗಳವಾರ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘8 ವರ್ಷಗಳ ಅಧಿಕಾರಾವಧಿಯಲ್ಲಿ ಮೋದಿ ಅವರು ಆರ್ಥಿಕ ಬೆಳವಣಿಗೆಯ ಗುರಿಗಳನ್ನು ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಇದರ ಜತೆಗೆ, 2016 ರಿಂದ ದೇಶದ ವಾರ್ಷಿಕ ಅಭಿವೃದ್ಧಿ ದರವು ಕುಸಿಯುತ್ತಿದೆ. ರಾಷ್ಟ್ರೀಯ ಭದ್ರತೆಯು ಭಾರಿ ದುರ್ಬಲಗೊಂಡಿದೆ. ಚೀನಾವನ್ನು ಅರ್ಥ ಮಾಡಿಕೊಳ್ಳಲು ಮೋದಿಗೆ ಆಗಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ ಈ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಈಗಲೂ ಅವಕಾಶವಿದೆ. ಆದರೆ ಅದು ಹೇಗೆ ಎಂದು ಅವರಿಗೆ ಗೊತ್ತಿದೆಯೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಸ್ವಾಮಿ ಅವರ ಈ ಟ್ವೀಟ್‌ಗೆ ‘ಆ್ಯಂಗ್ರಿ ಮರಾಠಿ’ ಎಂಬ ಟ್ವಿಟರ್‌ ಹ್ಯಾಂಡಲ್‌ನಿಂದ ಪ್ರತಿಕ್ರಿಯೆ ರೂಪದಲ್ಲಿ ಸಲಹೆಯೊಂದು ವ್ಯಕ್ತವಾಗಿದೆ. ‘ ಸ್ವಾಮಿ ಅವರೇ. ನೀವು ಪ್ರಧಾನಿ ಮೋದಿ ಅವರಿಗೆ ಈ ವಿಚಾರಗಳನ್ನು ತಲುಪಿಸಿ. ಅವರು ಒಪ್ಪದಿದ್ದರೂ ವಿವರಿಸಿ ಹೇಳುವ ನಿಮ್ಮ ಕೆಲಸ ನೀವು ಮಾಡಿ’ ಎಂದು ಕೋರಲಾಗಿದೆ

ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ, ‘ನಾನು 2015 ರಿಂದ 2019 ರವರೆಗೆ ಇದೇ ಪ್ರಯತ್ನ ಮಾಡಿದೆ. ಆದರೆ ಅವರು ಅರ್ಥಶಾಸ್ತ್ರದ ಬಗ್ಗೆ ಜ್ಞಾನ ಹೊಂದಿಲ್ಲ. ಚೀನಾ ಮತ್ತು ಅದರ ಮಿತ್ರ ರಾಷ್ಟ್ರ ರಷ್ಯಾವನ್ನು ಏಕೆ ಎದುರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ತಿಳಿದ ನಂತರ ಎಲ್ಲ ಕೈಬಿಟ್ಟೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.