ADVERTISEMENT

ಮೋದಿ ಅವಧಿಯ ಅಸಮಾನತೆಯು ಬ್ರಿಟಿಷ್ ಆಡಳಿತದ ಅವಧಿಕ್ಕಿಂತ ಹೆಚ್ಚಿದೆ: ಜೈರಾಮ್ ರಮೇಶ್

ಪಿಟಿಐ
Published 10 ಜೂನ್ 2025, 11:02 IST
Last Updated 10 ಜೂನ್ 2025, 11:02 IST
ಜೈರಾಮ್ ರಮೇಶ್
ಜೈರಾಮ್ ರಮೇಶ್   

ನವದೆಹಲಿ: ಮೋದಿ ಆಡಳಿತದಲ್ಲಿ ಭಾರತದ ಅಸಮಾನತೆಯ ಮಟ್ಟವು ವಸಾಹತುಶಾಹಿ ಬ್ರಿಟಿಷ್ ಆಡಳಿತಾವಧಿಯ ಮಟ್ಟವನ್ನು ಮೀರಿಸಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ. ಪ್ರಮುಖ ವಲಯಗಳಲ್ಲಿ ಏಕಸ್ವಾಮ್ಯತೆ ಮತ್ತು ಭಾರತೀಯರ ವೇತನದ ನಿಶ್ಚಲತೆ ಹೆಚ್ಚಿದೆ ಎಂದು ಅದು ದೂರಿದೆ.

ಕ್ಯಾಪ್‌ಜೆಮಿನಿ ಸಂಶೋಧನಾ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಅಸಮಾನತೆಯು ಆಮ್ ಆದ್ಮಿಗೆ ದೊಡ್ಡ ಪ್ರಮಾಣದ ನಿರಾಶೆ ಉಂಟುಮಾಡಿದರೆ, 2024ರಲ್ಲಿ 33,000ಕ್ಕೂ ಹೆಚ್ಚು ಹೊಸ 'ಖಾಸ್ ಆದ್ಮಿ' ಮಿಲಿಯನೇರ್‌ಗಳು ಸೃಷ್ಟಿಸಿದೆ ಎಂದು ವರದಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕಳೆದ ಹನ್ನೊಂದು ವರ್ಷಗಳಲ್ಲಿ ಆರ್ಥಿಕ ಅಸಮಾನತೆಯನ್ನು ಮತ್ತಷ್ಟು ಗಾಢಗೊಳಿಸಲಾಗಿದೆ. ಮೋದಿ ಆಡಳಿತಾವಧಿಯಲ್ಲಿ ಭಾರತದ ಅಸಮಾನತೆಯ ಮಟ್ಟವು ವಸಾಹತುಶಾಹಿ ಬ್ರಿಟಿಷ್ ಆಡಳಿತವನ್ನು ಮೀರಿಸಿದೆ. ಪ್ರಮುಖ ವಲಯಗಳಲ್ಲಿನ ಏಕಸ್ವಾಮ್ಯವು ದೊಡ್ಡ ಪ್ರಮಾಣದ ಬೆಲೆ ಏರಿಕೆಗೆ ಕಾರಣವಾಗಿದೆ. ಗ್ರಾಮೀಣ ಕೃಷಿ ಕಾರ್ಮಿಕರಿಂದ ಹಿಡಿದು ಸಂಬಳ ಪಡೆಯುವ ಮಧ್ಯಮ ವರ್ಗದವರೆಗೆ ಸರಾಸರಿ ಭಾರತೀಯರ ವೇತನವು ಕಳೆದ ಹತ್ತು ವರ್ಷಗಳಲ್ಲಿ ನಿಶ್ಚಲಗೊಂಡಿದೆ ಎಂದು ರಮೇಶ್ ಹೇಳಿದ್ದಾರೆ.

ADVERTISEMENT

11 ವರ್ಷಗಳಲ್ಲಿ ಭಾರತದಲ್ಲಿ ಶ್ರೀಮಂತರ ಸಂಪತ್ತು ಶೇ 8.8ರಷ್ಟು ಏರಿಕೆಯಾಗಿದೆ ಎಂದು ರಮೇಶ್ ಹೇಳಿದರು.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಮೋದಿ ಆಡಳಿತದಲ್ಲಿ ಧನಿಕರು ದಾಖಲೆಯ ಸಂಖ್ಯೆಯಲ್ಲಿ ಬೆಳೆಯುತ್ತಲೇ ಇದ್ದಾರೆ. ಬೆರಗುಗೊಳಿಸುವ ದರದಲ್ಲಿ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಅವರು ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದು ಅನ್ಯಾಯ ಮತ್ತು ಸಮರ್ಥನೀಯ ಸಂಗತಿ ಮಾತ್ರವಲ್ಲ, ಇದು ನಮ್ಮ ದೇಶದ ಬೆಳವಣಿಗೆಗೆ ಅಪಾಯವಾಗಿದೆ. ಈ ಧನಿಕರು 2030ರ ವೇಳೆಗೆ ವಿದೇಶದಲ್ಲಿ ಹೆಚ್ಚು ಹೆಚ್ಚು ಆಸ್ತಿಗಳನ್ನು ಮಾಡಲು ಯೋಜಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಆದ್ದರಿಂದ ಧನಿಕರ ಕೇಂದ್ರೀಕೃತವಾಗುತ್ತಿರುವ ಸಂಪತ್ತು ತ್ವರಿತವಾಗಿ ವಿದೇಶಕ್ಕೆ ಹೋಗಲಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಇದು ಭಾರತಕ್ಕೆ ಭರಿಸಲಾಗದ ಸಂಪತ್ತಿನ ಸೋರಿಕೆಯಾಗಿದೆ ಎಂದು ರಮೇಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.