ಕೋಯಿಕ್ಕೋಡ್: ಅಪರೂಪವಾದ ಮತ್ತು ಪ್ರಾಣಕ್ಕೆ ಎರವಾಗುವ ‘ಮಿದುಳು ತಿನ್ನುವ ಅಮೀಬಾ’ ಸೋಂಕಿಗೆ ತುತ್ತಾಗಿದ್ದ ಕೇರಳದ ಬಾಲಕನೊಬ್ಬ ಚೇತರಿಸಿಕೊಂಡಿದ್ದಾನೆ.
‘ಮಿದುಳು ತಿನ್ನುವ ಅಮೀಬಾ’ ಎಂಬ ಹೆಸರಿನಿಂದ ಕರೆಯಲಾಗುವ ‘ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್‘ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಸಂಪೂರ್ಣ ಗುಣಮುಖನಾಗಿದ್ದಾನೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೋಮವಾರ ಹೇಳಿದ್ದಾರೆ. ಈ ಸೋಂಕಿಗೆ ತುತ್ತಾದವರ ಪೈಕಿ ಶೇ 97 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ.
‘ಸೋಂಕಿಗೆ ತುತ್ತಾದವರಲ್ಲಿ ಸಾವಿನ ಪ್ರಮಾಣವನ್ನು ಗಮನಿಸಿದರೆ ಬಾಲಕ ಚೇತರಿಸಿಕೊಂಡಿರುವುದು ದೇಶದಲ್ಲೇ ಅಪರೂಪದ ಘಟನೆ ಎನ್ನಬಹುದು. ಇದುವರೆಗೆ ವಿಶ್ವದಲ್ಲಿ 11 ಮಂದಿ ಮಾತ್ರ ಈ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ’ ಎಂದು ಸಚಿವೆ ಮಾಹಿತಿ ನೀಡಿದರು.
‘ಮಿದುಳಿನ ಉರಿಯೂತ ಕಾಣಿಸಿಕೊಂಡ ಬಾಲಕನನ್ನು ಅದೇ ದಿನ ಕೋಯಿಕ್ಕೋಡ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಇಲಾಖೆಯು ‘ಮಿಲ್ಟೆಫೊಸೀನ್’ ಔಷಧವನ್ನು ಒದಗಿಸಿತು. ಮೂರು ವಾರಗಳ ಚಿಕಿತ್ಸೆಯ ಬಳಿಕ ಬಾಲಕ ಚೇತರಿಸಿಕೊಂಡಿದ್ದಾನೆ. ಸೋಂಕನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದ್ದು ಮತ್ತು ಸೂಕ್ತ ಚಿಕಿತ್ಸೆ ಲಭಿಸಿದ್ದು ಬಾಲಕ ಗುಣಮುಖನಾಗಲು ಕಾರಣ’ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.