ADVERTISEMENT

ಜೋಶಿಮಠ ಬಿಕ್ಕಟ್ಟು: ‘ಎನ್‌ಟಿಪಿಸಿ ತೊಲಗಲಿ’ ಸ್ಥಳೀಯರ ಕೂಗು

'NTPC go back' grows louder

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 16:38 IST
Last Updated 17 ಜನವರಿ 2023, 16:38 IST
   

ಜೋಶಿಮಠ (ಪಿಟಿಐ): ಭೂಕುಸಿತದಿಂದ ಮುಳುಗುತ್ತಿರುವ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಪಟ್ಟಣದಲ್ಲಿ ಸಂತ್ರಸ್ತರ ಸ್ಥಳಾಂತರ ಮತ್ತು ಅಪಾಯಕಾರಿ ಕಟ್ಟಡಗಳ ತೆರವು ಕಾರ್ಯ ನಡೆಯುತ್ತಿರುವ ಬೆನ್ನಲ್ಲೇ ಈ ಪ್ರದೇಶದಲ್ಲಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ) ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂಬ ಸ್ಥಳೀಯರು ಮತ್ತು ಹೋರಾಟಗಾರರ ಬೇಡಿಕೆಯ ಕೂಗು ವ್ಯಾಪಕವಾಗುತ್ತಿದೆ.

‘ಎನ್‌ಟಿಪಿಸಿ ಗೋ ಬ್ಯಾಕ್‌’ ಘೋಷಣೆಯ ಪೋಸ್ಟರ್‌ಗಳು ಕೆಲವು ದಿನಗಳಿಂದ ಪಟ್ಟಣದ ಪ್ರಮುಖ ಮಾರುಕಟ್ಟೆಗಳಲ್ಲಿ ಹಲವು ಸಣ್ಣ ಮತ್ತು ದೊಡ್ಡ ಅಂಗಡಿಗಳು, ಮನೆಗಳು, ವಾಹನಗಳು ಮತ್ತು ಜಾಹೀರಾತು ಫಲಕಗಳ ಮೇಲೆ ರಾರಾಜಿಸುತ್ತಿವೆ.

ಎನ್‌ಟಿಪಿಸಿಯ 520 ಮೆಗಾವಾಟ್‌ ಜಲ ವಿದ್ಯುತ್‌ ಉತ್ಪಾದನೆಯ ತಪೋವನ– ವಿಷ್ಣುಗಢ ಯೋಜನೆಗೆ ಕೊರೆದಿರುವ 12 ಕಿ.ಮೀ ಸುರಂಗ ಗಂಡಾಂತರ ತಂದೊಡ್ಡಿದೆ ಎಂದು ಸ್ಥಳೀಯರು ಆರೋಪಿಸಿದರು.

ADVERTISEMENT

‘ಎನ್‌ಟಿಪಿಸಿಯ ಕಾಮಗಾರಿ ಹೆಚ್ಚಿನ ಹಾನಿ ಮಾಡಿದೆ. ಈ ಯೋಜನೆ 2012ಕ್ಕೆ ಪೂರ್ಣವಾಗಬೇಕಿತ್ತು, ಆದರೆ ಕಾಮಗಾರಿ ಶುರುವಾಗಿದ್ದೇ ಗಡುವು ಮುಗಿದಾಗ. ಇನ್ನೂ ನಡೆಯುತ್ತಿರುವ ಕಾಮಗಾರಿ ಪಟ್ಟಣದ ಅನೇಕ ಭಾಗಗಳಲ್ಲಿ ಹಲವು ಸಮಸ್ಯೆ ಸೃಷ್ಟಿಸಿದೆ’ ಎಂದು ಸ್ಥಳೀಯ ಉದ್ಯಮಿ ಸೂರಜ್ ಕಪ್ರುವಾನ್ ಹೇಳಿದರು.

ಜೋಶಿಮಠ ಬಚಾವೊ ಸಂಘರ್ಷ ಸಮಿತಿ (ಜೆಬಿಎಸ್‌ಎಸ್‌) ಎನ್‌ಟಿಪಿಸಿಯ ಜಲವಿದ್ಯುತ್‌ ಯೋಜನೆಗೆ ಸ್ಥಗಿತಕ್ಕೆ ಒತ್ತಾಯಿಸಿ ಸೋಮವಾರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಇದರಲ್ಲಿ ಸಂತ್ರಸ್ತರು ಮತ್ತು ಜನಪ್ರತಿನಿಧಿಗಳು ಪಾಲ್ಗೊಂಡು, ‘ಎನ್‌ಟಿಪಿಸಿ ಗೋ ಬ್ಯಾಕ್‌’ ಘೋಷಣೆ ಮೊಳಗಿಸಿದರು.

‘ಎನ್‌ಟಿಪಿಸಿ ಸ್ಥಾವರದ ಕೆಲಸ ಈಗ ಸ್ಥಗಿತವಾಗಿದೆ. ತಜ್ಞರು ಸಮೀಕ್ಷೆ ನಡೆಸುತ್ತಿದ್ದು, ಅವರ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಚಮೋಲಿ ಜಿಲ್ಲಾಧಿಕಾರಿ ಹಿಮಾಂಶು ಖುರಾನಾ ತಿಳಿಸಿದರು.

ಭೂಗರ್ಭದ ಜಲಾಗಾರಕ್ಕೆ ಧಕ್ಕೆ

ತಪೋವನ– ವಿಷ್ಣುಗಢ ಯೋಜನೆಯ ಸುರಂಗ ಕಾಮಗಾರಿಯು 2009ರಲ್ಲಿ ಭೂಗರ್ಭದ ದೊಡ್ಡ ಜಲಮೂಲಕ್ಕೆ ಹಾನಿಮಾಡಿತು. ಇದು ದಿನಕ್ಕೆ 60ರಿಂದ 70 ದಶಲಕ್ಷ ಲೀಟರ್ ನೀರು ಹೊರನುಗ್ಗಲು ದಾರಿಯಾಗಿ, ಭೂಮೇಲ್ಮೈ ಸ್ವರೂಪ ಅಸ್ಥಿರಗೊಳಿಸಿದೆ ಎಂದು ಬೆಂಗಳೂರಿನಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯ ಭೂ ವಿಜ್ಞಾನ ಕೇಂದ್ರದ ಭೂಕಂಪಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ ಕುಸಾಲಾ ರಾಜೇಂದ್ರನ್ ಹೇಳಿದರು.

ಹಾನಿಯಾದ ಮನೆಗಳ ತೆರವಿಗೆ ಸಮೀಕ್ಷೆ

ಗೋಪೇಶ್ವರ (ಪಿಟಿಐ): ಭೂಕುಸಿತದಿಂದ ಬಿರುಕುಬಿಟ್ಟು ಅಪಾಯಕಾರಿ ಸ್ಥಿತಿಯಲ್ಲಿರುವ ಮನೆ– ಕಟ್ಟಡಗಳನ್ನು ನೆಲಸಮಗೊಳಿಸಲು ಜಿಲ್ಲಾಡಳಿತ ಇಲ್ಲಿನ ಜೆ.ಪಿ ಕಾಲೋನಿಯಲ್ಲಿ ಮಂಗಳವಾರ ತಾಂತ್ರಿಕ ಸಮೀಕ್ಷೆ ಆರಂಭಿಸಿದೆ.

ಅತೀ ಹೆಚ್ಚು ಹಾನಿಪೀಡಿತ ಜೋಶಿಮಠದ ಮಾರ್ವಾರಿ ಪ್ರದೇಶದ ಜೆ.ಪಿ. ಕಾಲೋನಿಯ ಬಹುತೇಕ ಮನೆಗಳು ಒಂದೇ ಮಹಡಿ ಮತ್ತು ಶೀಟುಗಳ ಮೇಲ್ಚಾವಣಿ ಹೊಂದಿವೆ. ಇವುಗಳ ತೆರವಿಗೆ ಹೆಚ್ಚು ಸಮಯ ಬೇಕಿಲ್ಲ ಎಂದು ಸಮೀಕ್ಷೆಯಲ್ಲಿ ತೊಡಗಿರುವ, ಹೆಸರು ಬಯಸದ ಎಂಜಿನಿಯರ್ ಒಬ್ಬರು ತಿಳಿಸಿದರು.

ಕೆಲವು ಕಟ್ಟಡಗಳಲ್ಲಿ ಬಿರುಕುಗಳು 1 ರಿಂದ 2 ಮಿಲಿ ಮೀಟರ್ ಅಗಲವಾಗಿವೆ. ಆದರೆ, ಅವು ಹೊಸ ಬಿರುಕುಗಳಲ್ಲ. ಹಾನಿಗೊಳಗಾದ ಕಟ್ಟಡಗಳು ಮತ್ತು ಮೂಲಸೌಕರ್ಯಗಳ ತೆರವು ಪೀಡಿತ ಪ್ರದೇಶದ ಮೇಲಿನ ಹೊರೆ ತಗ್ಗಿಸುವುದಾಗಿದೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.