ADVERTISEMENT

ಭಾರತ– ಟಿಬೆಟ್‌ ಗಡಿಯಲ್ಲಿ ಚೀನಾದಿಂದಲೇ ಆಕ್ರಮಣ: ಪೆನ್ಪಾ ತ್ಸೆರಿಂಗ್‌

ತವಾಂಗ್‌ ಭಾರತದ ಅವಿಭಾಜ್ಯ ಅಂಗ * 1914ರ ಒಪ್ಪಂದಕ್ಕೆ ಬದ್ಧ

ಪಿಟಿಐ
Published 4 ಜನವರಿ 2023, 13:36 IST
Last Updated 4 ಜನವರಿ 2023, 13:36 IST
ಪೆನ್ಪಾ ತ್ಸೆರಿಂಗ್‌
ಪೆನ್ಪಾ ತ್ಸೆರಿಂಗ್‌   

ಕೋಲ್ಕತ್ತ (ಪಿಟಿಐ): ಭಾರತ– ಟಿಬೆಟ್‌ ಗಡಿಯಲ್ಲಿನ ಎಲ್ಲ ಆಕ್ರಮಣಗಳು ಏಕಪಕ್ಷೀಯವಾಗಿ ಚೀನಾದಿಂದ ನಡೆದಿವೆ ಎಂದು ಟಿಬೆಟನ್ ಗಡಿಪಾರು ಸರ್ಕಾರದ ಅಧ್ಯಕ್ಷ ಪೆನ್ಪಾ ತ್ಸೆರಿಂಗ್‌ ಪ್ರತಿಪಾದಿಸಿದ್ದಾರೆ.

ಭಾರತ ಮತ್ತು ಟೆಬೆಟ್‌ ನಡವಿನ ಗಡಿಯಾದ ಮೆಕ್‌ ಮೋಹನ್‌ ರೇಖೆಯನ್ನು ಒಪ್ಪಿ ಟಿಬೆಟ್‌ 1914ರಲ್ಲಿ ಒಪ್ಪಂದಕ್ಕೆ ಸಹಿ ಮಾಡಿದೆ. ಹೀಗಾಗಿ ತವಾಂಗ್‌ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ತವಾಂಗ್‌ ಮತ್ತು ಲಡಾಖ್‌ನಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಪಿಎಲ್‌ಎ ನಡುವೆ ನಡೆದಿರುವ ಘರ್ಷಣೆಗಳ ಕುರಿತು ಮಾತನಾಡಿದ ಅವರು, ‘ಎಲ್ಲ ಆಕ್ರಮಣಗಳು ಚೀನಾದ ಕಡೆಯಿಂದ ನಡೆಯುತ್ತಿವೆ ಎಂಬುದು ನಮಗೆ ಗೊತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಭಾರತ ಮತ್ತು ಚೀನಾ ನಡುವೆ 1959ರವರೆಗೆ ಯಾವುದೇ ಗಡಿ ಇರಲಿಲ್ಲ. ಭಾರತ ಗಡಿಯಿದ್ದದ್ದು ಟಿಬೆಟ್‌ನೊಂದಿಗೆ. ಬ್ರಿಟಿಷ್‌ ಇಂಡಿಯಾ ಮತ್ತು ಟಿಬೆಟ್‌ ನಡುವೆ 1914ರಲ್ಲಿ ನಡೆದ ಸಿಮ್ಲಾ ಒಪ್ಪಂದಕ್ಕೆ ನಾವು ಸಹಿ ಹಾಕಿದ್ದೇವೆ. ಕಾನೂನುಬದ್ಧ ಗಡಿಯಾಗಿ ಮೆಕ್‌ ಮೋಹನ್‌ ರೇಖೆಯನ್ನು ನಾವು ಒಪ್ಪುತ್ತೇವೆ ಮತ್ತು ದೃಢವಾಗಿ ನಿಲ್ಲುತ್ತೇವೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

‘ನಾವು ತವಾಂಗ್‌ ಅನ್ನು ಭಾರತದ ಅವಿಭಾಜ್ಯ ಅಂಗವೆಂದು ಪೂರ್ಣವಾಗಿ ಮಾನ್ಯ ಮಾಡುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

1950ರಲ್ಲಿಯೇ ಚೀನಾ ಸೇನೆ ಟಿಬೆಟ್‌ ಅನ್ನು ಆಕ್ರಮಿಸಿದ್ದರೂ, ದಲೈ ಲಾಮಾ ಸರ್ಕಾರ ತನ್ನದೇ ಆದ ಸೈನ್ಯದೊಂದಿಗೆ ಕಾರ್ಯ ನಿರ್ವಹಿಸುವುದನ್ನು ಮುಂದುವರಿಸಿತ್ತು. ಬೀಜಿಂಗ್‌ ಜೊತೆ ಆಗ ನಡೆದಿದ್ದ ಒಪ್ಪಂದದ ಪ್ರಕಾರ ಟಿಬೆಟ್‌ ಅನ್ನು ಸ್ವಾಯತ್ತ ಪ್ರದೇಶವೆಂದು ಗುರುತಿಸಲಾಗಿತ್ತು. ಚೀನಾದ ಸೇನೆ 1959ರಲ್ಲಿ ಟಿಬೆಟಿಯನ್ನರ ದಂಗೆಯನ್ನು ಕ್ರೂರವಾಗಿ ಹತ್ತಿಕ್ಕಿದ ಬಳಿಕ, ಟಿಬೆಟ್‌ ಸರ್ಕಾರದ ಆಗಿನ ಮುಖ್ಯಸ್ಥ ದಲೈ ಲಾಮಾ ಭಾರತಕ್ಕೆ ಪಲಾಯನ ಮಾಡಿದರು. ಆ ಬಳಿಕ ಚೀನಾ– ಭಾರತದ ಗಡಿ ವಿವಾದ ಮುನ್ನೆಲೆಗೆ ಬಂದಿದೆ.

‘ಚೀನಾ ಅಧಿಕಾರ ಶಕ್ತಿಯನ್ನು ಮಾತ್ರ ಗೌರವಿಸುತ್ತದೆ’ ಎಂದಿರುವ ತ್ಸೆರಿಂಗ್‌, ‘ತನ್ನ ವೈಫಲ್ಯಗಳನ್ನು ಮರೆ ಮಾಚಲು ತೈವಾನ್‌, ದಕ್ಷಿಣ ಚೀನಾ ಸಮುದ್ರ, ತವಾಂಗ್‌ ವಿಷಯದಲ್ಲಿ ಕಾಲು ಕೆರೆದುಕೊಂಡು ನಿಲ್ಲುತ್ತದೆ’ ಎಂದು ಹೇಳಿದ್ದಾರೆ.

ಅಮೆರಿಕ– ಚೀನಾ ಸಂಬಂಧಗಳ ವಿಷಯ ಬಂದಾಗ ತನ್ನನ್ನು ಸಮಾನವಾಗಿ ಕಾಣುತ್ತಿಲ್ಲ ಎಂದು ಚೀನಾ ದೂರುತ್ತದೆ. ಆದರೆ ಏಷ್ಯಾದ ದೇಶಗಳೊಂದಿಗೆ ತನ್ನ ಸಂಬಂಧದ ವಿಚಾರ ಬಂದಾಗ ಚೀನಾ ಇತರ ದೇಶಗಳನ್ನು ಯಾವಾಗಲೂ ಸಮಾನವಾಗಿ ಕಂಡಿಲ್ಲ ಎಂದು ಅವರು ದೂರಿದ್ದಾರೆ.

‘ಚೀನಾ ತನ್ನ ಆರ್ಥಿಕ ಪ್ರಗತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಅಲ್ಲದೆ ಕೋವಿಡ್‌ ಪರಿಸ್ಥಿತಿಯನ್ನೂ ಸಮರ್ಥವಾಗಿ ನಿಯಂತ್ರಿಸಿಲ್ಲ’ ಎಂದಿರುವ ಅವರು, ‘ಕೋವಿಡ್‌ನಿಂದ ಇಡೀ ಜಗತ್ತೇ ಚೇತರಿಸಿಕೊಂಡಿದೆ. ಆದರೆ ಈಗ ಪುನಃ ಕೋವಿಡ್‌ ಅನ್ನು ರಫ್ತು ಮಾಡಲು ಚೀನಾ ಬಯಸುತ್ತಿದೆ. ಇದು ಚೀನಾದ ಬೇಜವಾಬ್ದಾರಿಯಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.