ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಿದೆ. ವಿದ್ಯಾರ್ಥಿಗಳು ತಮ್ಮ ಮನಸ್ಸಿಗೆ ಆಪ್ತವಾಗಿರುವ ಭಾಷೆಯಲ್ಲಿ ಪಾಠವನ್ನು ಕಲಿಯಲು ಅವಕಾಶವಾದರೆ, ಖಂಡಿತವಾಗಿಯು ಅದು ದೊಡ್ಡ ವಿಶ್ವಾಸವನ್ನು ಮೂಡಿಸಲಿದೆ ಎಂದು ಪ್ರಧಾನಿ ಹೇಳಿದರು.
ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಪ್ರಸ್ತಾಪಿಸಿದ ಪ್ರಧಾನಿ
ಜನ ಔಷಧಿ ಯೋಜನೆಯಿಂದಾಗಿ ಬಡವರು, ಅಗತ್ಯವಿರುವವರಿಗೆ ಕೈಗೆಟುಕುವ ದರದಲ್ಲಿ ಔಷಧಗಳು ಸಿಗುತ್ತಿವೆ. 75,000 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬ್ಲಾಕ್ ಮಟ್ಟದಲ್ಲಿ ಆಸ್ಪತ್ರೆಗಳ ಸಂಪರ್ಕದ ಕುರಿತು ಕಾರ್ಯಾಚರಿಸುತ್ತಿದ್ದೇವೆ. –ಪ್ರಧಾನಿ ಮೋದಿ
ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಣೆ
ಭಾರತದಲ್ಲಿರುವ ಎಲ್ಲ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ ಸಿಗಲಿದ್ದು, ಅಲ್ಲಿ ಶಿಕ್ಷಣ ಪಡೆಯಬಹುದಾಗಿದೆ.
ದೇಶದ 75ನೇ ಸ್ವಾತಂತ್ರೋತ್ಸವವನ್ನು 75 ವಾರಗಳ ಆಚರಣೆಗೆ ಪಣತೊಟ್ಟಿದ್ದೇವೆ. 2021ರ ಮಾರ್ಚ್ 12ರಿಂದ 2023ರ ಆಗಸ್ಟ್ 15ರವರೆಗೂ 'ಅಮೃತ ಮಹೋತ್ಸವ' ನಡೆಯಲಿದೆ. ಭಾರತೀಯ ರೈಲ್ವೆ ಸಹ ದೇಶದ ಜೊತೆಗೆ ಮಹತ್ತರ ಪರಿವರ್ತನೆಯನ್ನು ಕಂಡಿದೆ ಎಂದು ಪ್ರಧಾನಿ ಹೇಳಿದರು.
ಸ್ವಾಮಿತ್ವ ಯೋಜನೆಯು ಗ್ರಾಮೀಣ ಭಾರತದ ಬದುಕನ್ನು ಬದಲಿಸುತ್ತಿದೆ. ಗ್ರಾಮೀಣ ಜನರ ಭೂಮಿ ನಕ್ಷೆ ರೂಪಿಸಲು ಮತ್ತು ಹಲವು ಯೋಜನೆಗಳು ಹಾಗೂ ಸಾಲಗಳಿಗೆ ಆನ್‌ಲೈನ್‌ನಲ್ಲಿ ಮನವಿ ಸಲ್ಲಿಸಲು ಡ್ರೋನ್‌ಗಳು ಸಹಕಾರಿಯಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
'ಸಣ್ಣ ಇಳುವರಿದಾರರ ಮೇಲೆ ಸರ್ಕಾರ ಗಮನಹರಿಸಿದೆ. 10 ಕೋಟಿ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹1.5 ಲಕ್ಷ ಕೋಟಿ ಸಂದಾಯವಾಗಿದೆ' ಎಂದರು.
ಭಾರತ ಸರ್ಕಾರವು ಇ–ಕಾಮರ್ಸ್ ಪ್ಲಾಟ್‌ಫಾರ್ಮ್ ಶುರು ಮಾಡಲಿದ್ದು, ಹಳ್ಳಿಯ ಕರಕುಶಲಕರ್ಮಿಗಳಿಗೆ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಹಳ್ಳಿಯ ಅಭಿವೃದ್ಧಿ ಪಥವು ಹೊಸ ಆಯಾಮವನ್ನು ಪಡೆಯುತ್ತಿದೆ. ಹಳ್ಳಿಗಳಲ್ಲಿ ವಿದ್ಯುತ್ ಮತ್ತು ನೀರಿನ ಸಂಪರ್ಕ ಮಾತ್ರವೇ ಇಲ್ಲ, ಡಿಜಿಟಲ್ ಉದ್ಯಮಿಗಳೂ ರೂಪುಗೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಸ್ವಾತಂತ್ರೋತ್ಸವ ಭಾಷಣದಲ್ಲಿ ಹೇಳಿದರು.
ಆಧುನಿಕ ಜಗತ್ತಿನಲ್ಲಿ ಎಲ್ಲ ರೀತಿಯ ತಂತ್ರಜ್ಞಾನ, ಮೂಲಸೌಕರ್ಯಗಳ ಅಭಿವೃದ್ಧಿಗೆ, ಅಳವಡಿಕೆಗೆ ಎಲ್ಲರೂ ಜೊತೆಗೂಡಿ ಕೆಲಸ ಮಾಡಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಲಡಾಖ್‌ನಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಲಡಾಖ್‌ನ 'ಇಂಡಸ್ ಸೆಂಟ್ರಲ್ ಯೂನಿವರ್ಸಿಟಿ' ದೇಶದ ಉನ್ನತ ಶಿಕ್ಷಣ ಕೇಂದ್ರವಾಗಲಿದೆ– ಪ್ರಧಾನಿ ಮೋದಿ
'ಸಬ್‌ಕಾ ಸಾತ್ ಸಬ್‌ಕಾ ವಿಕಾಸ್– ಸಬ್‌ಕಾ ವಿಶ್ವಾಸ್'ನಲ್ಲಿ ನಾವೆಲ್ಲರೂ ನಂಬಿಕೆ ಇಟ್ಟಿದ್ದೇವೆ. ಇಂದು ಘೋಷಿಸುತ್ತಿದ್ದೇನೆ, ನಮ್ಮ ಎಲ್ಲರ ಗುರಿಯನ್ನು ಸಾಧಿಸಲು 'ಸಬ್‌ಕಾ ಸಾತ್ ಸಬ್‌ಕಾ ವಿಕಾಸ್–ಸಬ್‌ಕಾ ವಿಶ್ವಾಸ್ ಮತ್ತು ಸಬ್‌ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ಅತ್ಯಗತ್ಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
* ದೇಶದ ಎಲ್ಲ ಯೋಜನೆಗಳು ಶೇ 100ಕ್ಕೆ ನೂರಷ್ಟು ಜನರಿಗೆ ಸಂಪೂರ್ಣ ತಲುಪಬೇಕು.
* ಕಠಿಣ ಸಮಯದಲ್ಲಿ ದೇಶದ ಅಸಾಮಾನ್ಯ ಹೋರಾಟ, ಕರ್ತವ್ಯದ ಮೂಲಕ ಕೋವಿಡ್ ಎದುರಿನ ಸಮರವನ್ನು ನಡೆಸಿದೆ. ಸಾಕಷ್ಟು ತಾಳ್ಮೆಯಿಂದ ಕೋವಿಡ್ ವಿರುದ್ಧ ಹೋರಾಟ ನಡೆಸಿದೆ.
* ಈವರೆಗೂ ದೇಶದ 54 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ತಲುಪಿದೆ.
ಹೊಸಪೇಟೆ (ವಿಜಯನಗರ): ನೂರು ಅಡಿ ಎತ್ತರದ ಎರಡು ಧ್ವಜ ಸ್ತಂಭಗಳಲ್ಲಿ ಭಾನುವಾರ ಬೆಳಿಗ್ಗೆ ತ್ರಿವರ್ಣ ಧ್ವಜಾರೋಹಣ ಮಾಡಲಾಯಿತು.
ನಗರ ಹೊರವಲಯದ ಜೋಳದ ರಾಶಿ ಗುಡ್ಡದಲ್ಲಿ ಹೊಸದಾಗಿ ನಿರ್ಮಿಸಿರುವ ಧ್ವಜ ಸ್ತಂಭದಲ್ಲಿ ಸಚಿವ ಆನಂದ್ ಸಿಂಗ್ ಅವರ ಆಪ್ತ ಸಹಾಯಕ ಧರ್ಮೇಂದ್ರ ಸಿಂಗ್ ಧ್ವಜಾರೋಹಣ ಮಾಡಿದರು.
ನಗರದ ರೈಲು ನಿಲ್ದಾಣದಲ್ಲಿ ನಿರ್ಮಿಸಿರುವ ನೂರು ಅಡಿ ಎತ್ತರದ ಹೊಸ ಧ್ವಜ ಸ್ತಂಭದಲ್ಲಿ ತಾಂತ್ರಿಕ ಕಾರಣಗಳಿಂದ ಧ್ವಜಾರೋಹಣ ಸಾಧ್ಯವಾಗಲಿಲ್ಲ. ಹೀಗಾಗಿ ಅದರ ಬದಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.
ಇನ್ನು ಮುಂದೆ ಪ್ರತಿ ವರ್ಷ ಆಗಸ್ಟ್ 14ರಂದು ದೇಶದ 'ವಿಭಜನೆಯ ಕರಾಳ ನೆನಪಿನ ದಿನವಾಗಿ' ಆಚರಿಸಲಾಗುತ್ತದೆ.
ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ, 1947ರ ವಿಭಜನೆಯ ಸಂದರ್ಭವನ್ನು ನೆನಪಿಸಿಕೊಂಡಿರುವ ಪ್ರಧಾನಿ, ‘ವಿಭಜನೆಯ ನೋವನ್ನು ಎಂದಿಗೂ ಮರೆಯಲಾಗದು. ತಿಳಿಗೇಡಿಗಳಿಂದ ಭುಗಿಲೆದ್ದ ದ್ವೇಷ–ಹಿಂಸಾಚಾರದಲ್ಲಿ ನಮ್ಮ ಲಕ್ಷಾಂತರ ಸೋದರ ಸೋದರಿಯರು ಸ್ಥಳಾಂತರ ಗೊಳ್ಳಬೇಕಾಯಿತು; ಆ ಸಂದರ್ಭದಲ್ಲಿ ಅನೇಕರು ಪ್ರಾಣ ಕಳೆದುಕೊಂಡರು’ ಎಂದರು.
ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಎಲ್ಲ ಕ್ರೀಡಾಪಟುಗಳಿಗೆ ಚಪ್ಪಾಳೆ ತಟ್ಟುವ ಮೂಲಕ ಪ್ರಧಾನಿ ಮೋದಿ ಪ್ರೋತ್ಸಾಹಿಸಿ, ಅಭಿನಂದನೆ ಸಲ್ಲಿಸಿದರು. ಎಲ್ಲರೂ ಪದಕ ಗೆಲ್ಲುವುದು ಸಾಧ್ಯವಾಗದಿದ್ದರೂ, ದೇಶದ ಯುವ ಪೀಳಿಗೆಗೆ ಸ್ಪೂರ್ತಿ ತುಂಬಿದ್ದಾರೆ ಎಂದರು. ಸ್ವತಃ ಚಪ್ಪಾಳಿ ತಟ್ಟಿ ಮೋದಿ ಅಭಿನಂದನೆ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು. ಭದ್ರತಾ ಪಡೆಗಳಿಂದ 21 ಗನ್ ಸೆಲ್ಯೂಟ್ ಸಲ್ಲಿಸಲಾಯಿತು. ಹೆಲಿಕಾಪ್ಟರ್‌ಗಳು ಹೂವಿನ ಮಳೆ ಸುರಿಸಿದವು.
ಮಹಾತ್ಮ ಗಾಂಧಿ, ಕಿತ್ತೂರು ರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ನೆಹರೂ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್,...ಎಲ್ಲ ಮಹಾ ಪುರಷರನ್ನು ದೇಶವು ಸ್ಮರಿಸುತ್ತಿದೆ.
ದೇಶ ವಿಭಜನೆಯ ದಿನವಾದ ಆಗಸ್ಟ್ 14 ಅನ್ನು, ಇನ್ನು ಮುಂದೆ ‘ವಿಭಜನೆಯ ಕರಾಳ ನೆನಪಿನ ದಿನ’ವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಟ್ವೀಟ್ ಮೂಲಕ ಘೋಷಿಸಿದ್ದಾರೆ.
ಆಗಸ್ಟ್ 14- ವಿಭಜನೆಯ ಕರಾಳ ನೆನಪಿನ ದಿನ: ಪ್ರಧಾನಿ ನರೇಂದ್ರ ಮೋದಿ | Prajavani
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಕ್ರೀಡಾಪಟುಗಳು ಸ್ವಾತಂತ್ರ್ಯೋತ್ಸದಲ್ಲಿ ಭಾಗಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್‌ಘಾಟ್‌ನಿಂದ ಕೆಂಪುಕೋಟೆ ತಲುಪಿದ್ದು, ಶಸಸ್ತ್ರ ಪಡೆಗಳು, ಪೊಲೀಸ್ ಪಡೆ ಗೌರವ ಸಲ್ಲಿಸಿದವು.
ಜಮ್ಮು ಮತ್ತು ಕಾಶ್ಮೀರದ ಇಬ್ಬರು ಧೈರ್ಯಶಾಲಿ ಪೊಲೀಸರಿಗೆ ದೇಶದ ಉನ್ನತ ಶೌರ್ಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಇಬ್ಬರಿಗೂ ಮರಣೋತ್ತರವಾಗಿ ಈ ಪ್ರಶಸ್ತಿಗಳು ದೊರೆಯಲಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಬಾಬು ರಾಮ್ ಅವರಿಗೆ ಅಶೋಕ ಚಕ್ರ ಹಾಗೂ ಕಾನ್‌ಸ್ಟೆಬಲ್ ಅಲ್ಥಾಫ್ ಹುಸೇನ್ ಭಟ್ ಅವರಿಗೆ ಕೀರ್ತಿ ಚಕ್ರ ಘೋಷಿಸಲಾಗಿದೆ.
ಸೇನೆಯ ಆರು ಯೋಧರಿಗೆ ಶೌರ್ಯ ಚಕ್ರ ಪದಕ ಘೋಷಿಸಲಾಗಿದೆ. ಇವರಲ್ಲಿ ಒಬ್ಬರಿಗೆ ಮರಣೋತ್ತರ ಪದಕ ನೀಡಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ಭಯೋತ್ಪಾದಕರ ವಿರುದ್ಧ ನಡೆಸಿದ ಕಾರ್ಯಾಚರಣೆಯ ಸಂದರ್ಭದಲ್ಲಿ ತೋರಿದ ಸಾಹಸ ಮತ್ತು ಶೌರ್ಯ ಪರಿಗಣಿಸಿ ಈ ಪದಕ ನೀಡಲಾಗುತ್ತಿದೆ.
ಮೇಜರ್ ಅರುಣ್ ಕುಮಾರ್ ಪಾಂಡೆ, ಮೇಜರ್ ರವಿ ಕುಮಾರ್ ಚೌಧರಿ, ಕ್ಯಾಪ್ಟನ್ ಅಶುತೋಷ್ ಕುಮಾರ್ (ಮರಣೋತ್ತರ), ಕ್ಯಾಪ್ಟನ್ ವಿಕಾಸ್ ಖತ್ರಿ, ರೈಫಲ್‌ಮ್ಯಾನ್ ಮುಕೇಶ್ ಕುಮಾರ್ ಮತ್ತು ಸಿಪಾಯಿ ನೀರಜ್ ಅಹ್ಲಾವತ್ ಅವರಿಗೆ ಶೌರ್ಯ ಚಕ್ರ ಪದಕ ಘೋಷಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಮಹಾತ್ಮ ಗಾಂಧಿ ಸಮಾಧಿ ಸ್ಥಳ ರಾಜ್‌ಘಾಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು. ಅಲ್ಲಿಂದ ಪ್ರಧಾನಿ ಕೆಂಪು ಕೋಟೆಯತ್ತ ಸಾಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.