ನವದೆಹಲಿ: ಭಾರತೀಯ ವಾಯುಪಡೆಯು ಇದೇ ಮೊದಲ ಬಾರಿಗೆ ‘ಸಮಗ್ರ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆ’ಯ (ಐಎಡಬ್ಲುಎಸ್) ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನೆರವೇರಿಸಿದೆ.
ಒಡಿಶಾದ ಕರಾವಳಿಯ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ ಶನಿವಾರ ನಡೆದ ಈ ಪರೀಕ್ಷಾರ್ಥ ಪ್ರಯೋಗವು, ಐಎಡಬ್ಲುಎಸ್ ಕ್ಷಮತೆಯನ್ನು ಸಾಬೀತುಪಡಿಸಿತು. ಪ್ರಾದೇಶಿಕ ಭದ್ರತೆ ವಿಚಾರದಲ್ಲಿ ಸವಾಲುಗಳನ್ನು ಎದುರಿಸಲು ಸೇನೆಯ ಸಾಮರ್ಥ್ಯ ವೃದ್ಧಿಸುವ ಅಗತ್ಯತೆಯನ್ನು ಕೂಡ ಈ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
‘ಆಪರೇಷನ್ ಸಿಂಧೂರ’ ನಡೆದ ಮೂರು ತಿಂಗಳ ನಂತರ ಈ ಪರೀಕ್ಷೆ ನಡೆಸಿರುವುದು ಗಮನಾರ್ಹ. ಈ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಪಡಿಸಿರುವ ಡಿಆರ್‌ಡಿಒ, ಸಶಸ್ತ್ರ ಪಡೆಗಳು ಹಾಗೂ ಪೂರಕ ಕಾರ್ಯ ಕೈಗೊಂಡಿರುವ ಉದ್ಯಮಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಭಿನಂದಿಸಿದ್ದಾರೆ.
ಐಎಡಿಡಬ್ಲುಎಸ್ ಬಹು ಹಂತದ ವಾಯುಪ್ರದೇಶ ರಕ್ಷಣಾ ವ್ಯವಸ್ಥೆಯಾಗಿದ್ದು ದೇಶೀಯವಾಗಿಯೇ ಅಭಿವೃದ್ಧಿಪಡಿಸಿರುವ ಕ್ಷಿಪಣಿಗಳನ್ನು ಒಳಗೊಂಡಿದೆ.
ನೆಲದಿಂದ ಆಗಸಕ್ಕೆ ಕ್ಷಿಪ್ರವಾಗಿ ಚಿಮ್ಮಿ ಗುರಿಯನ್ನು ನಾಶ ಮಾಡಬಲ್ಲ ಕ್ಷಿಪಣಿಗಳು (ಕ್ಯೂಆರ್‌ಎಸ್‌ಎಎಂ) ಕಡಿಮೆ ವ್ಯಾಪ್ತಿಯ ವಾಯುಪ್ರದೇಶದಲ್ಲಿನ ಗುರಿ ನಾಶ ಮಾಡಬಲ್ಲ ರಕ್ಷಣಾ ವ್ಯವಸ್ಥೆ(ವಿಶಾರ್ಡ್ಸ್) ಲೇಸರ್ ನಿರ್ದೇಶಿತ ಅಧಿಕ ಶಕ್ತಿ ಹೊಂದಿರುವ ಶಸ್ತ್ರಗಳನ್ನು (ಡಿಇಡಬ್ಲು) ಈ ರಕ್ಷಣಾ ವ್ಯವಸ್ಥೆ ಒಳಗೊಂಡಿದೆ.
ಈ ಎಲ್ಲ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಕೇಂದ್ರೀಕೃತ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದ ಮೂಲಕ ನಿಯಂತ್ರಿಸಲಾಗುತ್ತದೆ. ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರವನ್ನು ಕೂಡ ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ.
ವಿಶಾರ್ಡ್ಸ್ ಮತ್ತು ಡಿಇಡಬ್ಲು ಗಳನ್ನು ಕ್ರಮವಾಗಿ ರಿಸರ್ಜ್ ಸೆಂಟರ್ ಇಮಾರತ್ ಹಾಗೂ ಸೆಂಟರ್ ಫಾರ್ ಹೈಎನರ್ಜಿ ಸಿಸ್ಟಮ್ಸ್ ಆ್ಯಂಡ್ ಸೈನ್ಸಸ್ ಅಭಿವೃದ್ಧಿಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.